ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನ ನೈತಿಕ-ಆಧ್ಯಾತ್ಮಿಕ ಶಿಬಿರ
ಕಾರ್ಕಳ : ಯುವಶಕ್ತಿ ಅಡ್ಡ ದಾರಿಯಲ್ಲಿ ಸಾಗುತ್ತಿದೆ. ಅವರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಹಿಂದೆ ಪೂರ್ವಜರಿಂದ ನೈತಿಕತೆ, ಆಧ್ಯಾತ್ಮಿಕ ವಿಚಾರಗಳು ಸಿಗುತ್ತಿದ್ದವು. ಗುರು-ಶಿಷ್ಯರಲ್ಲಿ ಅಂತಹ ಬಾಂಧವ್ಯ ಇರುತ್ತಿತ್ತು. ನಮಗೆ ವಯಸ್ಸಾಗಬೇಕೆ ಹೊರತು ನಮ್ಮ ವಿಚಾರ ಮನಸ್ಸುಗಳಿಗಲ್ಲ. ಯುವ ಜನತೆ ಸಾಮಾಜಿಕ ಜಾಲತಾಣಗಳಿಂದ ಹೊರಬರಬೇಕೆಂದು ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರಿನ ಸ್ವಾಮೀಜಿ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಕಾರ್ಕಳದ ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಹತ್ತನೇ ವರ್ಷದ ನೈತಿಕ ಮತ್ತು ಆಧ್ಯಾತ್ಮಿಕ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಬಿದ್ದಲ್ಲೇ ಎದ್ದು ನಿಲ್ಲಬೇಕು. ಅದಕ್ಕೆ ಆತ್ಮಶಕ್ತಿ ಮುಖ್ಯ. ಹಚ್ಚುವುದಾದರೆ ದೀಪವನ್ನು ಹಚ್ಚು ಬೆಂಕಿಯನ್ನಲ್ಲ. ಹಾಗಾಗಿ ಸಂತೋಷದಿಂದ ದೇವರೊಂದಿಗೆ ಸಂಪರ್ಕ ಸಾಧ್ಯ. ಇಂದಿನ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದಕ್ಕೆ ಕಾರಣ ಸರಿಯಾದ ಮೌಲ್ಯ ಶಿಕ್ಷಣ ಸಿಗದಿರುವುದು. ಜನನಿ ತಾನೇ ಮೊದಲ ಗುರುವು ಎಂದಂತೆ ತಾಯಿಯಿಂದ ಸಂಸ್ಕಾರ ದೊರೆಯುತ್ತದೆ. ಅವಿಭಕ್ತ ಕುಟುಂಬ ಇಂದು ವಿಭಕ್ತವಾಗಿದೆ. ಕೆಟ್ಟ ಕೆಲಸಗಳಿಂದ ದುಃಖ ಉಂಟಾಗುತ್ತದೆ. ಆದ್ದರಿಂದ ಆರೋಗ್ಯವಂತ ಸಮಾಜ ನಿರ್ಮಾಣ ವಿದ್ಯಾರ್ಥಿಗಳ ಕರ್ತವ್ಯವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ವಿ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಕೆ.ಪಿ. ಶೆಣೈ ಮಾತನಾಡಿ, ನೈತಿಕತೆ ಜೀವನದಲ್ಲಿ ಅಳವಡಿಸಿಕೊಳ್ಳುವ ಗುಣ. ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬುದನ್ನು ಅರಿತುಕೊಂಡರೆ ಅಭಿವೃದ್ಧಿ ಸಾಧ್ಯ. ಭಾರತಕ್ಕೆ ತನ್ನದೇ ಆದ ಹಿರಿಮೆ ಗರಿಮೆ ಇದೆ. ಒಂದಾಗಿ ಬಾಳುವಂತಹ ನೈತಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಎಸ್.ವಿ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಉಷಾ ನಾಯಕ್ ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮದಾಸ್ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಶಿಕ್ಷಕ ಸುನಿಲ್ ಎಸ್. ಶೆಟ್ಟಿ ಪರಿಚಯಿಸಿದರು. ಮುಖ್ಯಶಿಕ್ಷಕ ಯೋಗೇಂದ್ರ ನಾಯಕ್ ವಂದಿಸಿದರು. ಉಪನ್ಯಾಸಕಿ ಸುಮಂಗಲಾ ಪ್ರಭು ನಿರೂಪಿಸಿದರು.