ಕಾರ್ಕಳ : ಕಾರ್ಕಳ ಕ್ಷೇತ್ರದ ಜನತೆ ನನಗೆ ಸೇವೆ ಮಾಡಲು, ಒಳಿತಾಗುವಂತಹ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆಯೇ ವಿನ; ರಾಜಿನಾಮೆ ನೀಡುವುದಕ್ಕೆ ಅಲ್ಲ ಎಂದು ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಉದಯ ಕುಮಾರ್ ಶೆಟ್ಟಿ ಮುನಿಯಾಲು ಅವರ ಸವಾಲಿಗೆ ಪ್ರತಿಕ್ರಿಯೆ ನೀಡಿದ ಶಾಸಕರು ನೀವೊಬ್ಬ ಅವಕಾಶವಾದಿ ರಾಜಕಾರಣಿ. ಈ ಹಿಂದೆ ಕಾಂಗ್ರೆಸ್ಸಿನಲ್ಲಿದ್ದು ಅಲ್ಲಿಯ ಪ್ರಯೋಜನ ಅನುಭವಿಸಿ ಬಳಿಕ ರಾಜೀನಾಮೆ ನೀಡಿ ಬಿಜೆಪಿ ಸರಕಾರದ ಅವಧಿಯಲ್ಲಿ ಸಾಕಷ್ಟು ಲಾಭ ಪಡೆದವರು. ಕಾಂಗ್ರೆಸ್ಸಿನ ರಾಜೀನಾಮೆ ಯಾರ ಲಾಭಕ್ಕಾಗಿ ಮಾಡಿದ್ದಿರಿ ? ನಿಮ್ಮ ಸ್ವಂತಕೋಸ್ಕರವಲ್ಲವೇ ? ಎಂದು ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ಬಹಿರಂಗ ಪಡಿಸುವೆ
ರಾಜಕೀಯ ನಿವೃತ್ತಿಯ ನಿಮ್ಮ ಮಾತು ಎಷ್ಟು ಕಪಟ ಎನ್ನುವುದು ಗೊತ್ತಿದೆ. ಕಳೆದ ಎರಡು ವರುಷಗಳ ಹಿಂದೆ ರಾಜಕೀಯ ನಿವೃತ್ತಿಯಾಗುವುದಾಗಿ ಹೇಳಿಕೊಂಡು ರಾಜ್ಯದೆಲ್ಲೆಡೆ ಯಾರ್ಯಾರಿಂದ ಎಷ್ಟೆಷ್ಟು ಹಣ ಸಂಗ್ರಹಿಸಿದ್ದೀರಿ ಎನ್ನುವುದು ನನಗೆ ತಿಳಿದಿದೆ. ನೀವು ಇಚ್ಚೆಪಟ್ಟಲ್ಲಿ ಅದನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲು ನಾನು ಸಿದ್ದನಿದ್ದೇನೆ. ನಿಮ್ಮ ರಾಜಿನಾಮೆ, ರಾಜಕೀಯ ನಿವೃತ್ತಿ ಇವೆರಡು ಕೂಡ ನಿಮ್ಮ ಲಾಭಕೋಸ್ಕರವಲ್ಲದೆ ಸಾರ್ವಜನಿಕವಾಗಿ ಇದರಿಂದ ಏನು ಪ್ರಯೋಜನವಿಲ್ಲ ಎಂದು ಸುನಿಲ್ ಕುಮಾರ್ ತಿರುಗೇಟು ನೀಡಿದರು.
ಬದ್ಧತೆಯಿಲ್ಲದ ವ್ಯಕ್ತಿ
ರಾಜಕಾರಣದಲ್ಲಿ ಬದ್ಧತೆಯಿಲ್ಲದ ವ್ಯಕ್ತಿ ನೀವು. ಸಮಯ, ಸಂದರ್ಭಕ್ಕೆ ಅನುಸಾರ ರಾಜಕೀಯವಾಗಿ ಲಾಭ ಪಡೆದುಕೊಳ್ಳುವ ನೀವು ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಬಿಜೆಪಿ ಆಗಿ ಬದಲಾಗುತ್ತೀರಿ. ಕಾಂಗ್ರೆಸ್ ಆಡಳಿತದಲ್ಲಿ ಇರುವ ಕಾರಣಕ್ಕೆ ಅಲ್ಲಿ ಲಾಭ ಪಡೆದು ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿಜೆಪಿಯ ಕದ ತಟ್ಟುವಿರಿ. ಒಟ್ಟಾರೆ ನಿಮ್ಮ ಉದ್ದೇಶ ಸ್ವಂತ ಲಾಭವೇ ಹೊರತು ಸಾರ್ವಜನಿಕ ಹಿತಾಸಕ್ತಿಯಲ್ಲ. ನಿಮ್ಮ ರಾಜಕೀಯ ನಡೆಯ ಬಗ್ಗೆ ಕಾರ್ಕಳದ ಜನತೆಗೆ ಅರಿವಿದೆ ಎಂದು ಸುನಿಲ್ ಕುಮಾರ್ ತಿಳಿಸಿದರು.
ತನಿಖೆ ನಡೆಯಲಿ
ಪರಶುರಾಮ ಥೀಂ ಪಾರ್ಕ್ ನ ವಿಗ್ರಹ ಗುಣಮಟ್ಟದ ಕೊರತೆ ಆಗಿದ್ದರೆ ಜಿಲ್ಲಾಧಿಕಾರಿ ಕ್ರಮವಹಿಸುತ್ತಾರೆ. ತನಿಖೆಗೆ ಒಪ್ಪಿಸುತ್ತಾರೆ. ಯಾವ ರೀತಿಯ ತನಿಖೆ ಬೇಕಾದರೂ ನಡೆಯಲಿ. ಅದಕ್ಕೆ ನನ್ನ ಸಹಮತವಿದೆ. ಅದರ ಗುತ್ತಿಗೆದಾರ ನಾನಲ್ಲ. ಗುಣಮಟ್ಟದಲ್ಲಿ ಲೋಪವಾದರೇ ಗುತ್ತಿಗೆದಾರನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಶಿಕ್ಷೆಗೆ ಒಳಪಡಿಸಲಿ. ಕಾಮಗಾರಿಗಳ ಗುಣಮಟ್ಟದ ಬಗ್ಗೆ ಯಾವ ರೀತಿ ತನಿಖೆ ನಡೆಯುತ್ತದೆ ಎನ್ನುವ ಕನಿಷ್ಠ ಜ್ಞಾನ ಗುತ್ತಿಗೆದಾರನಾದ ನಿಮಗೆ ಇರಬೇಕಲ್ಲವೇ ? ಎಂದು ಸುನಿಲ್ ಕುಮಾರ್ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿದರು.
ಎಲ್ಲಿ ಹೋಗಿದ್ದೀರಿ ?
ಗೋಮಾಳ ಜಾಗದಲ್ಲಿ ಕಾಂಗ್ರೆಸ್ ವ್ಯಕ್ತಿ ಕ್ರಶರ್ ನಡೆಸುತಿದ್ದಾಗ ಎಲ್ಲಿ ಹೋಗಿದ್ರಿ ? ಪ್ರತಿಮೆ ನಿರ್ಮಾಣಗೊಂಡ ಸ್ಥಳ ಗೋಮಾಳ ಎನ್ನುವ ನೀವು ಅದೇ ಸ್ಥಳದಲ್ಲಿ ಈ ಹಿಂದೆ ಕಾಂಗ್ರೆಸ್ ವ್ಯಕ್ತಿಗಳೇ ಕ್ರಶರ್ ನಡೆಸುತ್ತಿದ್ದಾಗ ನೀವು ಎಲ್ಲಿ ಹೋಗಿದ್ದಿರಿ ? ಎಂದು ಸುನಿಲ್ ಕುಮಾರ್ ಪ್ರಶ್ನಿಸಿದರು.
ಉದ್ದೇಶವೇನು ?
ಉಮಿಕ್ಕಳ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿಸಿ ಸಾರ್ವಜನಿಕ ಬಳಕೆಗೆ ಬಳಸಿದಾಗ ಅಪಸ್ವರ ಎತ್ತುತ್ತೀರಿ. ಕಾರ್ಕಳ ಪ್ರವಾಸಿ ಕ್ಷೇತ್ರವಾಗಿ ಬೆಳೆದು ಉಮಿಕ್ಕಳ ಬೆಟ್ಟ ಅಭಿವೃದ್ದಿ ಹೊಂದಿ ಕಾರ್ಕಳ ಕ್ಷೇತ್ರದ ಜನ ಆರ್ಥಿಕವಾಗಿ ಸದೃಢವಾಗುವುದು ನಿಮಗೆ ಬೇಕಿಲ್ಲ. ತಂಡ ಕಟ್ಟಿಕೊಂಡು ಟೀಕೆ- ಟಿಪ್ಪಣಿಗಳಲ್ಲಿ ತೊಡಗಿಸಿಕೊಂಡು ಕ್ಷೇತ್ರದ ಹೆಸರು ಹಾಳುಗೆಡವುತ್ತಿದ್ದೀರಿ. ರಾಜಕಾರಣ ಮಾಡುವುದಕ್ಕೆ ಸಾಕಷ್ಟು ವಿಚಾರವಿದೆ. ಜನೋಪಯೋಗಿ ಅನುಷ್ಠಾನಗಳಿಗೆ ಅಡ್ಡಿ ಪಡಿಸುವುದು ಒಳ್ಳೆಯದಲ್ಲ ಎಂದವರು ಪ್ರಕಟನೆಯಲ್ಲಿ ತಿಳಿಸಿದರು.