ಕಾಡುಹೊಳೆ ಜಂಗಮೇಶ್ವರ ಮಠದಲ್ಲಿ ಶ್ರೀಕೃಷ್ಣ ಲೀಲೋತ್ಸವ
ಮುನಿಯಾಲು : ಲೋಕಕ್ಕೆ ಗೀತೆಯ ಬೆಳಕನ್ನು ನೀಡಿದ ಭಗವಂತ ಶ್ರೀಕೃಷ್ಣ. ಶ್ರೀಕೃಷ್ಣ ಮಾಡಿದ ಯಾವುದೇ ಕೆಲಸ ಕಾರ್ಯ ವಾದ-ವಿವಾದಕ್ಕೆ ಕಾರಣವಾಗುತ್ತಿದ್ದರೂ, ಅದರ ಹಿಂದೆ ಒಂದು ಪರಮ ಉದ್ದೇಶವಂತೂ ಎದ್ದು ಕಾಣುತ್ತಿತ್ತು. ಅದುವೇ ಧರ್ಮದ ಸಂಸ್ಥಾಪನೆ, ಅಧರ್ಮದ ನಿರ್ಮೂಲನೆ ಎಂದು ಶ್ರೀ ಜಂಗಮೇಶ್ವರ ಮಠದ ಅರ್ಚಕ ವಿದ್ವಾನ್ ರಾಘವೇಂದ್ರ ಭಟ್ ಹೇಳಿದರು.
ಗುರುವಾರ ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದಲ್ಲಿ ಶ್ರೀ ಕೃಷ್ಣ ಜಯಂತಿ ಪ್ರಯುಕ್ತ ನಡೆದ 20ನೇ ವರ್ಷದ ಶ್ರೀ ಕೃಷ್ಣ ಲೀಲೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಶ್ರೀ ಮಠದ ಆಡಳಿತ ಮೊಕ್ತೇಸರ ಚಿರಂಜಿತು ಅಜಿಲ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ನಾಗರಾಜ ನಾಯಕ್, ಮಹಿಳಾ ಭಜನೆ ಮಂಡಳಿ ಅಧ್ಯಕ್ಷೆ ವೀಣಾ ನಾಯಕ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಹಲವು ದಶಕಗಳಿಂದ ನಿಸ್ವಾರ್ಥವಾಗಿ ದೇವಸ್ಥಾನದ ವಿವಿಧ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದ ಹಿರಿಯ ಚೇತನ ಕಾಡುಹೊಳೆ ಬೆಟ್ಟಿನಮನೆ ಸುಂದರ ಶೆಟ್ಟಿ ಮತ್ತು ಕಳೆದ 20 ವರ್ಷಗಳಿಂದ ಮಕ್ಕಳಿಗಾಗಿ ನಡೆದ ರಾಮಾಯಣ ಸೇರಿದಂತೆ ಹಲವಾರು ಧಾರ್ಮಿಕ ಹಿನ್ನೆಲೆಯುಳ್ಳ ಪರೀಕ್ಷೆಗಳ ಮೇಲುಸ್ತುವಾರಿ ವಹಿಸುತ್ತಿರುವ ನಿವೃತ್ತ ಅಧ್ಯಾಪಕ ಅಜೆಕಾರು ವೆಂಕಟರಮಣ ಉಪಾಧಾಯ ಇವರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಜ್ಯೋತಿ ಹರೀಶ್ ಸ್ವಾಗತಿಸಿದರು, ಉದಯ ಪ್ರಭು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ರಾಮಾಯಣ ಪರೀಕ್ಷೆ, ಮುದ್ದು ಕೃಷ್ಣ ವೇಷ ಸ್ಪರ್ಧೆ, ಆಟೋಟ ಸ್ಪರ್ಧೆ ವಿಜೇತ ಹಾಗೂ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಲಾಯಿತು. ನಂತರ ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.