ಜಿ20 ಅತಿಥಿಗಳಿಗೆ ಹಲಸಿನ ಹಣ್ಣು, ಕಾಡಿನ ಅಣಬೆ ಖಾದ್ಯ, ಕೆಂಪಕ್ಕಿ ಅನ್ನ…

ರಾಷ್ಟ್ರಪತಿಯಿಂದ ವಿದೇಶಿ ಗಣ್ಯರಿಗೆ ಅಪ್ಪಟ ಭಾರತೀಯ ಶೈಲಿಯ ಔತಣಕೂಟ

ಹೊಸದಿಲ್ಲಿ: ದಿಲ್ಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಬೆಳಗ್ಗಿನಿಂದಲೂ ಸತತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ವಿಶ್ವ ನಾಯಕರಿಗೆ ರಾತ್ರಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ವಿಶೇಷ ಔತಣಕೂಟ ಏರ್ಪಡಿಸಿದ್ದು, ಈ ಔತಣಕೂಟದ ವಿಶೇಷ ತಿನಿಸುಗಳ ಪಟ್ಟಿ ಇದೀಗ ಬಹಿರಂಗಗೊಂಡಿದೆ.
ಶೃಂಗಸಭೆ ಶನಿವಾರದ ಕಾರ್ಯಕ್ರಮಗಳು, ಸಭೆಗಳು ಮುಕ್ತಾಯವಾದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಜಿ20 ನಾಯಕರು ಮತ್ತು ಪ್ರತಿನಿಧಿಗಳಿಗಾಗಿ ದಿಲ್ಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ವಿಶೇಷ ಔತಣಕೂಟ ಏರ್ಪಡಿಸಿದ್ದರು. ರಾತ್ರಿಯ ಭೋಜನಕೂಟಕ್ಕೆ ನಾಯಕರನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು.
ಅತಿಥಿಗಳಿಗೆ ವೆಲ್​ಕಮ್ ಡ್ರಿಂಕ್ಸ್ ನೀಡಲು ಸ್ವರ್ಣಲೇಪಿತ ವಸ್ತುಗಳ ಬಳಕೆ ಮಾಡಲಾಗಿದೆ. 200 ಕುಶಲಕರ್ಮಿಗಳು ಸಿದ್ಧಪಡಿಸಿರುವ 15,000 ಬೆಳ್ಳಿ ವಸ್ತುಗಳ ಬಳಕೆ ಮಾಡಿದ್ದು, ಭಾರತದ ಪಾಕ ವೈವಿಧ್ಯತೆಯನ್ನು ಔತಣಕೂಟ. ಪ್ರತಿಬಿಂಬಿಸಿದೆ
ಔತಣಕೂಟದಲ್ಲಿ ಸೊಗಸಾದ ಭಾರತೀಯ ಸಸ್ಯಾಹಾರಿ ಆಹಾರಗಳನ್ನು ತಯಾರಿಸಲಾಗಿತ್ತು.
ರಾಗಿಯ ಗರಿಗರಿಯಾದ ತಿನಿಸು ಅದರ ಮೇಲೆ ಮೊಸರು ಮತ್ತು ಮಸಾಲೆಯುಕ್ತ ಚಟ್ನಿ ಸ್ಟಾರ್ಟರ್‌ ಆಗಿ ಇತ್ತು. ಇದಕ್ಕೆ ಪಾತ್ರಂ ಎಂದು ಹೆಸರಿಡಲಾಗಿತ್ತು.
ಮುಖ್ಯ ಭೋಜನಕ್ಕೆ ವನವರ್ಣಂ ಎಂದು ಹೆಸರಿಟ್ಟಿದ್ದು, ಹಲಸಿನ ಹಣ್ಣು, ಕಾಡಿನ ಅಣಬೆ, ರಾಗಿ ಕರಿಬೇವು, ಕೆಂಪು ಅಕ್ಕಿಯ ಅನ್ನ ಇತ್ಯಾದಿಗಳನ್ನು ಬಳಸಿ ಭಾರತೀಯ ಶೈಲಿಯಲ್ಲೇ ಅಡುಗೆ ತಯಾರಿಸಲಾಗಿತ್ತು. ವಿದೇಶಿಯರಿಗೆ ಬ್ರೆಡ್‌ ಅನಿವಾರ್ಯವಾಗಿರುವುದರಿಂದ ಮುಂಬೈ ಪಾವ್ ಮತ್ತು ಏಲಕ್ಕಿ ಸುವಾಸನೆಯ ಸಿಹಿ ಬ್ರೆಡ್ ಇತ್ತು. ಸಿಹಿತಿಂಡಿ ವಿಭಾಗಕ್ಕೆ ಮಧುರಿಮಾ ಎಂದು ಹೆಸರು ಕೊಟ್ಟಿದ್ದು, ಇದರಲ್ಲಿ ಏಲಕ್ಕಿ ಸುವಾಸನೆಯ ಸಿರಿಧಾನ್ಯ ಪುಡ್ಡಿಂಗ್, ಅಂಜೂರದ ವಿಶೇಷ ಜಾಮ್ ಮತ್ತು ಅಂಬೆಮೊಹರ್ ರೈಸ್ ಕ್ರಿಸ್ಪ್ಸ್ಇತ್ತು.
ಪಾನೀಯಗಳಲ್ಲಿ ಕಾಶ್ಮೀರಿ ಕಹ್ವಾ, ಫಿಲ್ಟರ್ ಕಾಫಿ ಮತ್ತು ಡಾರ್ಜಿಲಿಂಗ್ ಚಹಾ ಸರಬರಾಜು ಮಾಡಲಾಯಿತು. ಇದಲ್ಲದೆ ಚಾಕೊಲೇಟ್‌ನಿಂದ ತಯಾರಿಸಿದ ವಿಶೇಷ ವೀಳ್ಯದೆಲೆಯ ಪಾನ್‌ಬೀಡಾ ನೀಡಲಾಯಿತು.

error: Content is protected !!
Scroll to Top