ಕಾರ್ಕಳ – ಹೆಬ್ರಿ ತಾಲೂಕಿನೆಲ್ಲೆಡೆ ಸಂಭ್ರಮದ ತೆನೆ ಹಬ್ಬ

ಕಾರ್ಕಳ : ಕಾರ್ಕಳ – ಹೆಬ್ರಿ ತಾಲೂಕಿನಾದ್ಯಂತ ಚರ್ಚ್‌ಗಳಲ್ಲಿ ಸೆ. 8 ರಂದು ಮೋಂತಿ ಫೆಸ್ತ್‌ (ತೆನೆ ಹಬ್ಬ) ಸಂಭ್ರಮದಿಂದ ಆಚರಿಸಲಾಯಿತು. ಕೊಂಕಣಿ ಕಥೋಲಿಕ್‌ ಕ್ರೈಸ್ತ ಬಾಂಧವರು ಚರ್ಚ್‌ಗೆ ತೆರಳಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಅತ್ತೂರು ಸೈಂಟ್‌ ಲಾರೆನ್ಸ್‌ ಚರ್ಚ್‌, ನಕ್ರೆ ಇಮ್ಯಾಕುಲೇಟ್‌ ಹಾರ್ಟ್‌ ಆಫ್‌ ಮೇರಿ ಚರ್ಚ್‌, ಕಾರ್ಕಳ ಕ್ರೈಸ್ಟ್‌ ಕಿಂಗ್‌ ಚರ್ಚ್‌, ಮಿಯ್ಯಾರು ಸೈಂಟ್‌ ಡೊಮಿನಿಕ್‌ ಚರ್ಚ್‌, ಹಿರ್ಗಾನ ಮರಿಯಾ ಗೊರಟ್ಟಿ ಚರ್ಚ್‌, ಅಜೆಕಾರು ಸೆಕ್ರೇಟ್‌ ಹಾರ್ಟ್‌ ಆಫ್‌ ಜೀಸಸ್‌ ಚರ್ಚ್‌, ಕಣಜಾರು ಅವರ್‌ ಲೇಡಿ ಆಫ್‌ ಲೂಡ್ಸ್‌ ಚರ್ಚ್‌, ಪರಪ್ಪಾಡಿ ನಿತ್ಯಾಧರ್‌ ಮಾತೆ ಚರ್ಚ್‌, ಕೇರದ ಸೈಂಟ್‌ ಥೆರೆಸಾ ಚರ್ಚ್‌ಗಳಲ್ಲಿ ತೆನೆ ಹಬ್ಬವನ್ನು ಸಡಗರ ಸಂಭ್ರಮದೊಂದಿಗೆ ಕ್ರೈಸ್ತ ಬಾಂಧವರು ಆಚರಿಸಿದರು.

ಅತ್ತೂರು ಸೈಂಟ್‌ ಲಾರೆನ್ಸ್‌ ಚರ್ಚ್‌ನಲ್ಲಿ ತೆನೆ ಹಬ್ಬ

ಹಬ್ಬದ ವಿಶೇಷತೆ
ಮೋಂತಿ ಫೆಸ್ತ್‌ ಕ್ಯಾಥೊಲಿಕ್ ಕ್ರೈಸ್ತ ಸಮುದಾಯದವರಿಗೆ ಒಂದು ಪ್ರಮುಖ ಹಬ್ಬ. ಯೇಸುಕ್ರಿಸ್ತರ ತಾಯಿ ಕನ್ಯಾಮೇರಿಯ ಜನ್ಮದಿನವಾಗಿ ಸೆ. 8ರಂದು ಈ ಹಬ್ಬವನ್ನು ಆಚರಿಸುತ್ತಾರೆ. ಆ. 30ರಿಂದ 9 ದಿನಗಳ ಕಾಲ ನೊವೆನಾ ಎಂಬ ವಿಶೇಷ ಪ್ರಾರ್ಥನೆ ನಡೆಸಿ ಸೆ.8 ರಂದು ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಕರಾವಳಿ ಕೊಂಕಣಿ ಕ್ರೈಸ್ತರಿಗೆ ಈ ಹಬ್ಬವನ್ನು ಕನ್ಯಾ ಮೇರಿ ಜನ್ಮದಿನದೊಂದಿಗೆ ತೆನೆ ಹಬ್ಬವಾಗಿಯೂ ಆಚರಿಸುತ್ತಾರೆ. ಕೊಂಕಣಿ ಕ್ರೈಸ್ತರು ನೊವೆನಾದ ನವದಿನಗಳಲ್ಲಿ ಶಿಶುವಾದ ಮೇರಿಯ ಮೂರ್ತಿಯನ್ನು ಹೂಗಳಿಂದ ಅಲಂಕರಿಸುತ್ತಾರೆ. ಪ್ರತಿದಿನವೂ ಮಕ್ಕಳು ಬುಟ್ಟಿ ತುಂಬಾ ಹೂವಿನೊಂದಿಗೆ ಚರ್ಚಿಗೆ ಬರುತ್ತಾರೆ. ನೊವೆನಾದ ಕೊನೆಯಲ್ಲಿ ಹಾಡು ಹಾಡುತ್ತಾ ಸಾಮೂಹಿಕವಾಗಿ ಪುಷ್ಪಾರ್ಚನೆ ಮಾಡುತ್ತಾರೆ. ಈ ದಿನ ಹೊಸ ಭತ್ತದ ತೆನೆಗಳು ಮತ್ತು ಇತರ ಬೆಳೆಕಾಣಿಕೆಗಳು ಹಾಗೂ ಬಾಲ ಮೇರಿಯ ಪ್ರತಿಮೆಯನ್ನು ಭಕ್ತಿಪೂರ್ವಕವಾಗಿ ಮೆರವಣಿಗೆಯಲ್ಲಿ ಚರ್ಚಿಗೆ ತಂದು ನಂತರ ಪೂಜೆಯನ್ನು ಪ್ರಾರಂಭಿಸುತ್ತಾರೆ. ಪೂಜೆಯ ಬಳಿಕ ಎಲ್ಲರಿಗೂ ಆಶೀರ್ವದಿಸಿದ ಭತ್ತದ ತೆನೆಯನ್ನು ಹಂಚುತ್ತಾರೆ. ಸುಗ್ಗಿಯ ಸಂಭ್ರಮದ ಸಂಕೇತವಾಗಿ ಇದನ್ನು ಮಾಡುತ್ತಾರೆ. ಹಾಗಾಗಿ ಇದನ್ನು ತೆನೆ ಹಬ್ಬ, ಕೊರಳ ಪರ್ಬ ಎಂದೂ ಕರೆಯುತ್ತಾರೆ. ಈ ದಿನ ಕ್ರೈಸ್ತರು ಮನೆಯಲ್ಲಿ ಹೊಸ ಅಕ್ಕಿ ಊಟ ಮಾಡುತ್ತಾರೆ. ಕೊಂಕಣಿ ಕ್ರೈಸ್ತರು ಈ ದಿನ ತರಕಾರಿಯ ಅಡುಗೆ ತಯಾರಿಸುತ್ತಾರೆ. ಮಾಂಸಾಹಾರವಿಲ್ಲದ ಏಕೈಕ ಹಬ್ಬ ಇದೊಂದೇ. ಚರ್ಚಿನಿಂದ ತಂದ ತೆನೆಯಿಂದ 5, 7 ಹೀಗೆ ಬೆಸ ಸಂಖ್ಯೆಯಲ್ಲಿ ಅಕ್ಕಿ ಕಾಳುಗಳನ್ನು ತೆಗೆದು ಪುಡಿ ಮಾಡಿ ಅನ್ನಕ್ಕೋ ಪಾಯಸಕ್ಕೋ ಸೇರಿಸುವ ಒಂದು ಸಂಪ್ರದಾಯವಿದೆ.error: Content is protected !!
Scroll to Top