ಎಕ್ಸಲೆಂಟ್‌ : ಜೈನ ಪಾಠ ಉದ್ಘಾಟನೆ – ಜಿನಧರ್ಮ ದೀಪಿಕೆ ಕೃತಿ ಅನಾವರಣ

ಮೂಡುಬಿದಿರೆ : ಅಹಿಂಸಾ ಪರಮೋಧರ್ಮದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೆಟ್ಟದ್ದನ್ನು ತ್ಯಜಿಸಿ ಒಳ್ಳೆಯದನ್ನು ಅನುಸರಿಸುವುದೇ ವೃತ. ಜೈನಧರ್ಮದ ತತ್ವಗಳನ್ನು ವಿಜ್ಞಾನವೂ ಕೂಡ ಒಪ್ಪುತ್ತದೆ. ಅಹಿಂಸೆಯ ಮೂಲಕ ಮೋಕ್ಷವನ್ನು ಸಂಪಾದಿಸುವುದು ಜೈನ ಧರ್ಮದ ಉದ್ದೇಶವಾಗಿದೆ. ಪ್ರತೀ ದಿನ ನಾವು ನಿಷ್ಕಲ್ಮಶ ಮನಸ್ಸಿನಿಂದ ಪ್ರಾರ್ಥಿಸಿದರೆ ದೇವರ ಒಲುಮೆಗೆ ಪಾತ್ರರಾಗುತ್ತೇವೆ. ಪರಿಶುದ್ಧವಾದ ಭಕ್ತಿ ಬದುಕಿನ ಸಾರ್ಥಕ್ಯತೆ ಮಾರ್ಗದರ್ಶಿಯಾಗುತ್ತದೆ ಎಂದು ಕಂಬದ ಹಳ್ಳಿಯ ಜೈನಮಠದ ಸ್ವಸ್ತಿಶ್ರೀ ಬಾನುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಮ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಅವರು ಸೆ. 8 ರಂದು ಮೂಡಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಜೈನ ಪಾಠ ಉದ್ಘಾಟಿಸಿ, ಜಿನಧರ್ಮ ದೀಪಿಕೆ ಕೃತಿ ಬಿಡುಗಡೆಗೊಳಿಸಿ ಶುಭಸಂಶನೆಗೈದರು.

ಜಿನಧರ್ಮ ದೀಪಿಕೆ ಕೃತಿ ಬಿಡುಗಡೆ

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಯುವರಾಜ್‌ ಜೈನ್ ಮಾತನಾಡಿ, ವಿದ್ಯೆಗೆ ಸಂಸ್ಕಾರ ಭೂಷಣ. ಅಂತೆಯೇ ಜೀವನದಲ್ಲಿ ಧಾರ್ಮಿಕತೆಗೆ ಬೆಲೆ ಕೊಡಬೇಕು. ಭಕ್ತಿ, ಭಾವವಿಲ್ಲದೆ ಮನುಷ್ಯ ಜನ್ಮ ಸಾರ್ಥಕತೆ ಪಡೆಯುವುದಿಲ್ಲ. ಜೈನ ಧರ್ಮದಲ್ಲಿರುವ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡಾಗ ಬದುಕು ಪಾವನವಾಗುತ್ತದೆ. ಎಲ್ಲಾ ಪುರಾತನ ಧರ್ಮ ಗ್ರಂಥಗಳಲ್ಲಿ ಜೈನ ಧರ್ಮದ ಉಲ್ಲೇಖವಿದೆ. ಜೈನ ಪಾಠಗಳಿಂದ ಆತ್ಮದ ಸಾಕ್ಷಾತ್ಕಾರವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೂಡಬಿದಿರೆ ಜೈನ್ ಮಿಲನ್‌ನ ಅಧ್ಯಕ್ಷ ದಿನೇಶ್‌ ಆನಡ್ಕ, ಚೌಟರ ಅರಮನೆಯ ಕುಲದೀಪ್, ಪ್ರಾಂಶುಪಾಲ ಪ್ರದೀಪ್‌ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಜೈನಧರ್ಮ ದೀಪಿಕೆ ಪುಸ್ತಕದ ಸಂಪಾದಕ, ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಸಂಪತ್‌ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ರಂಜಿತ್‌ ಜೈನ್‌ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ವಂದಿಸಿದರು.

error: Content is protected !!
Scroll to Top