ಅಯೋಧ್ಯೆಯ ಭವ್ಯ ರಾಮ ಮಂದಿರದ ವಿನ್ಯಾಸಗಾರ ಚಂದ್ರಕಾಂತ ಸೊಂಪೂರ್

ಜಗತ್ತಿನಾದ್ಯಂತ 150 ದೇವಸ್ಥಾನ ವಿನ್ಯಾಸ ಮಾಡಿದ ವಾಸ್ತುಶಿಲ್ಪಿ

ಮುಂದಿನ ವರ್ಷ ಜನವರಿ ತಿಂಗಳಲ್ಲಿ ಅಯೋಧ್ಯೆಯ ದಿವ್ಯ ಮತ್ತು ಭವ್ಯವಾದ ರಾಮಮಂದಿರ ಲೋಕಾರ್ಪಣೆ ಆಗುತ್ತಿದೆ ಎನ್ನುವುದೇ ಭುವನದ ಭಾಗ್ಯ. ಜಗತ್ತಿನಾದ್ಯಂತ ಇರುವ ಶತಕೋಟಿ ಹಿಂದೂಗಳು ಆ ಮಂದಿರವನ್ನು ಕಣ್ಣ ತುಂಬಿಸಿಕೊಳ್ಳಲು ಈಗಲೇ ತುದಿಗಾಲಲ್ಲಿ ನಿಂತಿದ್ದಾರೆ.
ಹಿಂದೂಗಳ 500 ವರ್ಷಗಳ ದೀರ್ಘ ನಿರೀಕ್ಷೆಯ ಬಳಿಕ ಆ ಅಮೃತ ಘಳಿಗೆ ಈಗ ಬಂದೇ ಬಿಟ್ಟಿದೆ. ಆ ಮಂದಿರ ‘ನ ಭೂತೋ ನ ಭವಿಷ್ಯತಿ’ ಆಗಿರಬೇಕೆಂದು ಪ್ರತಿಯೊಬ್ಬ ಹಿಂದೂವಿನ ಕನಸು. ಆ ರಾಮ ಮಂದಿರದ ನೀಲಿನಕ್ಷೆ ಮತ್ತು ವಿನ್ಯಾಸವನ್ನು ಸಿದ್ಧಮಾಡಿದವರು ಗುಜರಾತ್ ಮೂಲದ ಓರ್ವ ಯಶಸ್ವಿ ದೇಗುಲ ವಿನ್ಯಾಸಕರು. ಅವರ ಹೆಸರು ಚಂದ್ರಕಾಂತ್ ಸೊಂಪೂರ್. ಆ ವಿನ್ಯಾಸವು ಸಿದ್ಧವಾಗಿದ್ದು ಬರೋಬ್ಬರಿ ಮೂವತ್ತ ಮೂರು ವರ್ಷಗಳ ಹಿಂದೆ.

15 ತಲೆಮಾರುಗಳಿಂದ ಆ ಕುಟುಂಬ ದೇಗುಲಗಳ ವಿನ್ಯಾಸವನ್ನು ಮಾಡುತ್ತಿದೆ

ಹಿಂದೂ ದೇಗುಲಗಳ ವಿನ್ಯಾಸವನ್ನು ಮಾಡುವುದು ಸುಲಭದ ಕೆಲಸ ಅಲ್ಲ. ದೇವಸ್ಥಾನಗಳ ವಿನ್ಯಾಸ ಮಾಡುವಾಗ ಶಾಸ್ತ್ರ, ಸಂಪ್ರದಾಯ, ವಾಸ್ತು, ದಿಕ್ಕುಗಳು, ಪುರಾಣದ ಜ್ಞಾನ ಇವುಗಳು ಚೆನ್ನಾಗಿದ್ದರೆ ಮಾತ್ರ ಅದು ಸಾಧ್ಯವಿದೆ. ಅವರ ಕುಟುಂಬ ಕಳೆದ 15 ತಲೆಮಾರುಗಳಿಂದ ದೇಗುಲಗಳ ವಿನ್ಯಾಸದಲ್ಲಿ ಭಾರಿ ದೊಡ್ಡ ಹೆಸರು ಮಾಡಿದೆ. ಚಂದ್ರಕಾಂತ್ ಅವರ ಅಜ್ಜ ಪ್ರಭುಶಂಕರ ಸೊಂಪೂರ್ ಅವರು ಗುಜರಾತಿನ ಅತಿ ಪ್ರಸಿದ್ಧ ಸೋಮನಾಥ್ ಮಂದಿರದ (ಆಧುನಿಕ) ವಿನ್ಯಾಸವನ್ನು ಮಾಡಿದ್ದರು. ಇದೇ ಮನೆತನ ಗುಜರಾತಿನ ಸ್ವಾಮಿ ನಾರಾಯಣ ಮಂದಿರ, ಪಾಲನ್‌ಪುರದ ಅಂಬಾಜಿ ದೇವಸ್ಥಾನ, ಜಗತ್ಪ್ರಸಿದ್ದ ಹವಾ ಮಹಲ್, ವಾಧ್ವ ಅರಮನೆ ಮೊದಲಾದವುಗಳನ್ನು ವಿನ್ಯಾಸ ಮಾಡಿದ ಕೀರ್ತಿಯನ್ನು ಕೂಡ ಹೊಂದಿದೆ. ಅದರಲ್ಲಿಯೂ ಸ್ವಾಮಿ ನಾರಾಯಣ ಮಂದಿರವು ಜಗತ್ತಿನ ಗಮನ ಸೆಳೆದಿತ್ತು.

ಅಜ್ಜನಿಂದ ಮೊಮ್ಮಗನಿಗೆ ವಿನ್ಯಾಸದ ತರಬೇತಿ

ಚಂದ್ರಕಾಂತ್ ಅವರ ಅಜ್ಜ ಪ್ರಭಾಶಂಕರ್ ಸ್ವಾತಂತ್ರ್ಯದ ನಂತರ ಜೀರ್ಣೋದ್ಧಾರ ಆದ ಗುಜರಾತಿನ ಆಧುನಿಕ ಸೋಮನಾಥ್ ಮಂದಿರದ ವಿನ್ಯಾಸ ಮಾಡಿ ಭಾರಿ ಕೀರ್ತಿಗೆ ಭಾಜನರಾಗಿದ್ದರು. ಅವರಿಗೆ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಆ ದೇಗುಲದ ವಿನ್ಯಾಸ ಕೂಡ ಜಗತ್ತಿನಾದ್ಯಂತ ಇರುವ ಹಿಂದೂಗಳನ್ನು ತನ್ನ ಕಡೆಗೆ ಸೂಜಿಗಲ್ಲಿನಂತೆ ಸೆಳೆದಿತ್ತು. ನಂತರದ ವರ್ಷಗಳಲ್ಲಿ ಈ ಕುಟುಂಬ ದೇಶ ಮತ್ತು ವಿದೇಶಗಳಲ್ಲಿ 500ಕ್ಕಿಂತ ಅಧಿಕ ಬೃಹತ್ ಮಂದಿರಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವುಗಳಲ್ಲಿ ಜೈನ ಮಂದಿರಗಳು, ಬೌದ್ಧ ಮಂದಿರಗಳು ಕೂಡ ಇವೆ. ಸ್ವಾಮಿನಾರಾಯಣ ಮಂದಿರ, ಅಕ್ಷರಧಾಮ ಮಂದಿರ, ಅಮೆರಿಕದ ಟೆಕ್ಸಾಸಿನ ತಪೋ ಭೂಮಿ ಮಂದಿರ, ಲಂಡನ್ನಿನ ರಾಮ ಮಂದಿರ…ಇವುಗಳು ಅತಿ ಪ್ರಸಿದ್ಧಿ ಪಡೆದ ಮಂದಿರಗಳು. ಅವರು ಕಟ್ಟಿದ ಮಂದಿರಗಳೆಲ್ಲಾ ಲೋಕ ಪ್ರಸಿದ್ಧಿ ಪಡೆದಿವೆ.
ಚಂದ್ರಕಾಂತ್ ಅವರು ಸಣ್ಣ ಪ್ರಾಯದಲ್ಲಿ ತಂದೆಯನ್ನು ಕಳೆದುಕೊಂಡರು. ನಂತರ ಅಜ್ಜನಿಂದ ಮಂದಿರಗಳ ವಿನ್ಯಾಸಗಳನ್ನು ತುಂಬ ಚೆನ್ನಾಗಿ ಅಧ್ಯಯನ ಮಾಡಿದರು. ಅವರ ಇಬ್ಬರು ಮಕ್ಕಳು ಕೂಡ ಸಿವಿಲ್ ಇಂಜಿನಿಯರಿಂಗ್ ಕಲಿತಿದ್ದು ಅಪ್ಪನ ವಿನ್ಯಾಸಗೊಳಿಸಿದ ದೇಗುಲಗಳಿಗೆ ಆಧುನಿಕ ಸ್ಪರ್ಶ ನೀಡುತ್ತಿದ್ದಾರೆ.

ಅಶೋಕ್ ಸಿಂಘಾಲ್ ಅವರು ಮೊದಲು ಕರೆ ಮಾಡಿದ್ದು ಇದೇ ಚಂದ್ರಕಾಂತ್‌ಗೆ

ಅಯೋಧ್ಯೆಯ ರಾಮ ಮಂದಿರದ ಸುದೀರ್ಘ ಹೋರಾಟಗಳು ಅಂದಾಜು ಐನೂರು ವರ್ಷ ನಡೆದು ಒಂದು ಮುಖ್ಯ ಹಂತಕ್ಕೆ ಬಂದಿತ್ತು. ರಾಮ ಮಂದಿರದ ನಿರ್ಮಾಣ ಆಗಲೇ ಬೇಕು, ಅದು ರಾಮ ದೇವರು ಹುಟ್ಟಿದ್ದ ಅಯೋಧ್ಯಾ ನಗರದಲ್ಲಿಯೇ ಇರಬೇಕು ಎನ್ನುವುದು ಹಿಂದೂಗಳ ಶತಮಾನಗಳ ಕನಸಾಗಿತ್ತು.
ಆ ಕನಸು ಪೂರ್ತಿ ಮಾಡಲು ವಿಶ್ವ ಹಿಂದೂ ಪರಿಷತ್ತು ಹೊರಟಾಗ ಮೊದಲು ಆಯ್ಕೆ ಮಾಡಿದ್ದು ಇದೇ
ಚಂದ್ರಕಾಂತ್ ಸೊಂಪೂರ ಅವರನ್ನು. 1989ರ ಸುಮಾರಿಗೆ ಆಗಿನ ವಿಶ್ವ ಹಿಂದೂ ಪರಿಷತ್ತಿನ ಮುಖಂಡರಾದ ಅಶೋಕ್ ಸಿಂಘಾಲ್ ಅವರು ಚಂದ್ರಕಾಂತ್ ಅವರನ್ನು ಸಂಪರ್ಕ ಮಾಡಿ ಆ ಮಂದಿರದ ಸ್ಥಳದ ಬಳಿ ಕರೆದುಕೊಂಡು ಹೋಗಿದ್ದರು. ಆಗಿನ್ನೂ ವಿವಾದಿತ ಕಟ್ಟಡ ಹಾಗೆ ಇತ್ತು ಮತ್ತು ವ್ಯಾಜ್ಯ ಕೋರ್ಟಲ್ಲಿ ಇತ್ತು.
ಆದರೆ ಸಿಂಘಾಲ್ ಹೇಳಿದ ಮಾತು ‘ಚಂದ್ರಕಾಂತ್ ಜಿ, ಇದೇ ಜಾಗದಲ್ಲಿ ಭವ್ಯವಾದ, ದಿವ್ಯವಾದ ಮತ್ತು ಜಗತ್ತಿನಲ್ಲಿ ಅನ್ಯತ್ರ ಅಲಭ್ಯವಾದ ರಾಮಮಂದಿರದ ನಿರ್ಮಾಣ ಆಗುವುದು ಖಂಡಿತ. ನೀವು ವಿನ್ಯಾಸ ಮಾಡಿಕೊಡಬೇಕು’ ಎಂದು.
ಆಗ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ಕಾರಣ ಜಾಗವನ್ನು ಮೀಟರ್ ಟೇಪ್ ಹಿಡಿದು ಅಳತೆ ಮಾಡಲು ಅವಕಾಶ ಇರಲಿಲ್ಲ. ಆಗ ಚಂದ್ರಕಾಂತ್ ಅವರು ತಮ್ಮ ಪಾದದ ಸಹಾಯದಿಂದ ಅಳತೆ ಮಾಡಿ ಬರೆದು ಇಟ್ಟರು. ಅಶೋಕ್ ಸಿಂಘಾಲ್ ಮತ್ತೆ ಹೇಳಿದರು. ‘ಚಂದ್ರಕಾಂತ್‌ಜಿ, ನೀವು ಕೋರ್ಟ್, ವ್ಯಾಜ್ಯ ಇವುಗಳ ಬಗ್ಗೆ ಚಿಂತೆ ಮಾಡಬೇಡಿ. ವಿನ್ಯಾಸ ಮಾಡಿಕೊಡಿ. ದೇಗುಲ ಆಗುವುದನ್ನು ಜಗತ್ತಿನ ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ’ ಈ ಮಾತು ಹೇಳುವಾಗ ಅಶೋಕ್ ಸಿಂಘಾಲ್ ಅವರ ಕಣ್ಣಲ್ಲಿ ಆತ್ಮವಿಶ್ವಾಸ ಇತ್ತು ಮತ್ತು ಚಂದ್ರಕಾಂತ್ ಅವರ ಕಣ್ಣಲ್ಲಿ ನಂಬಿಕೆ ಇತ್ತು.

ಮುಂದಿನ ಮೂರು ತಿಂಗಳಿನಲ್ಲಿ ದೇಗುಲದ ಮೂರು ವಿನ್ಯಾಸ ಸಿದ್ಧ

ಮುಂದಿನ ಮೂರು ತಿಂಗಳು ಚಂದ್ರಕಾಂತ್ ಅವರಿಗೆ ಊಟ, ಹಸಿವು, ನಿದ್ರೆ ಎಲ್ಲ ಮರೆತುಹೋಗಿತ್ತು. ಶ್ರೀ ರಾಮನ ಪರಮ ಭಕ್ತರಾದ ಅವರಿಗೆ ಕನಸಲ್ಲಿ ರಾಮ ದೇವರು ಬಂದು ಮಾರ್ಗ ತೋರಿಸುತ್ತಾ ಇದ್ದರು.
ಕೇವಲ ಮೂರು ತಿಂಗಳ ಒಳಗೆ ದೇಗುಲದ ಮೂರು ವಿನ್ಯಾಸಗಳು ಸಿದ್ಧವಾದವು. ಅದನ್ನು ಸಂತರ ಮಂಡಳಿ ವೀಕ್ಷಣೆ ಮಾಡಿ ಒಂದು ವಿನ್ಯಾಸವನ್ನು ಆರಿಸಿತು.

ಎಲ್ಲವೂ ದೇವರ ಸಂಕಲ್ಪ ಎಂದರು ಚಂದ್ರಕಾಂತ್

ದಯವಿಟ್ಟು ಗಮನಿಸಿ. ಆಗ ಅಯೋಧ್ಯೆಯ ರಾಮ ಮಂದಿರದ ಹೋರಾಟ ಶಿಖರಕ್ಕೆ ಮುಟ್ಟಿತ್ತು. ಉತ್ತರಪ್ರದೇಶದ ಮುಲಾಯಂ ಸರಕಾರ ಮಂದಿರದ ನಿರ್ಮಾಣಕ್ಕೆ ವಿರುದ್ಧ ಇತ್ತು. ಕೋರ್ಟು ತೀರ್ಪು ಯಾವಾಗ ಬರಬಹುದು ಎಂಬ ಸ್ಪಷ್ಟನೆ ಯಾರಿಗೂ ಇರಲಿಲ್ಲ.
ಮುಂದೆ ನಡೆದ ಅಷ್ಟೂ ಘಟನೆಗಳು ನಮ್ಮ ಮುಂದಿವೆ. ಅಡ್ವಾಣಿ ಮಾಡಿದ ಅಯೋಧ್ಯಾ ರಥಯಾತ್ರೆ, ಗ್ರಾಮ ಗ್ರಾಮಗಳಲ್ಲಿ ಶಿಲಾ ಪೂಜನ, ವಿವಾದಿತ ಕಟ್ಟಡದ ಪತನ, ಸರಕಾರಗಳ ಪತನ, ರಾಮ ಮಂದಿರದ ಪರವಾಗಿ ಸುಪ್ರೀಂ ಕೋರ್ಟಿನ ತೀರ್ಪು, ಶ್ರೀ ರಾಮ ಮಂದಿರ ಟ್ರಸ್ಟ್ ರಚನೆ… ಎಲ್ಲವೂ ಒಂದೇ ಸರಳ ರೇಖೆಯಲ್ಲಿ ಪೋಣಿಸಿದ ಹಾಗೆ ಭಾಸವಾಗುತ್ತದೆ. ಅಶೋಕ್ ಸಿಂಘಾಲ್ ಅವರ ಸಂಕಲ್ಪ ಶಕ್ತಿ, ವಿಷನ್, ಕೋಟಿ ಕೋಟಿ ಹಿಂದೂಗಳ ಪ್ರಾರ್ಥನೆ ಎಲ್ಲವೂ ಶಕ್ತಿಶಾಲಿಯಾಗಿ ಕೆಲಸ ಮಾಡುತ್ತಿದ್ದವು.
ಸಂತರನ್ನು ಒಳಗೊಂಡ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಟ್ರಸ್ಟ್ ಚಂದ್ರಕಾಂತ್ ಅವರು ಮಾಡಿದ ಮೂರು ವಿನ್ಯಾಸಗಳಲ್ಲಿ ಉತ್ತಮವಾದ ಒಂದು ವಿನ್ಯಾಸವನ್ನು ಆಯ್ಕೆ ಮಾಡಿತು. ನಂತರ ಮರದ ಕೆತ್ತನೆಯ ದೇಗುಲದ ವಿನ್ಯಾಸ ಕೂಡ ಅವರು ಸಿದ್ಧ ಮಾಡಿಕೊಟ್ಟರು.
ಮುಂದೆ ಅಮೃತ ಮುಹೂರ್ತದಲ್ಲಿ ಸಂತರ ಮಾರ್ಗದರ್ಶನದಲ್ಲಿ ಭೂಮಿ ಪೂಜನ ನಡೆಯಿತು. ಅದರ ನಂತರ ದೇಗುಲದ ನಿರ್ಮಾಣ ಕಾರ್ಯ ಅತ್ಯಂತ ವೇಗವಾಗಿ ನಡೆಯುತ್ತಿದೆ. ಇತ್ತೀಚೆಗೆ ಸಂತರ ಸಲಹೆಯ ಮೇರೆಗೆ ಚಂದ್ರಕಾಂತ್ ಅವರು ತಮ್ಮ ವಿನ್ಯಾಸದಲ್ಲಿ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಕೂಡ ಮಾಡಿ ಕೊಟ್ಟಿದ್ದಾರೆ.

ಚಂದ್ರಕಾಂತ್ ಸೊಂಪೂರ ಹೆಸರು ಚಿರಸ್ಥಾಯಿ

ಮುಂದಿನ ವರ್ಷದ ಜನವರಿ ತಿಂಗಳಲ್ಲಿ ರಾಮಮಂದಿರದ ನಿರ್ಮಾಣ ಪೂರ್ತಿ ಆಗಲಿದೆ ಮತ್ತು ಭವ್ಯ ಮಂದಿರ ಲೋಕಾರ್ಪಣೆ ಆಗಲಿದೆ.
ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ, ಅದರೊಂದಿಗೆ ಸೀತಾ ಮಂದಿರ, ಲಕ್ಷ್ಮಣ ಮಂದಿರ, ಭರತ ಮಂದಿರ ಮತ್ತು ಗಣಪತಿ ದೇವರ ಮಂದಿರಗಳು ತಲೆ ಎತ್ತಿ ನಿಲ್ಲಲ್ಲಿವೆ. ಅಷ್ಟ ಭುಜಾಕೃತಿಯ ಪಂಚಾಂಗದ ಮೇಲೆ ಈ ಭವ್ಯ ದೇವಾಲಯ ಸಂಕೀರ್ಣವು ಜಗತ್ತಿನ ಹಿಂದೂಗಳ ಅತಿ ಶ್ರೇಷ್ಠ ಶ್ರದ್ಧಾ ಕೇಂದ್ರ ಆಗುವುದು ಖಂಡಿತ. ಅದರ ಮೂಲಕ ಭಾರತದ ಐನೂರು ವರ್ಷಗಳ ಕನಸು ನನಸು ಆಗಲಿದೆ. ಹಾಗೆಯೇ ಈ ಶತಮಾನಗಳ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಎರಡು ಲಕ್ಷ ಹಿಂದೂಗಳ ಆತ್ಮಕ್ಕೆ ಶಾಂತಿ ದೊರೆಯಲಿದೆ.
ಈ ಮಂದಿರದ ವಿನ್ಯಾಸದ ಮೂಲಕ ಚಂದ್ರಕಾಂತ ಸೊಂಪೂರ್ ಅವರು ಇತಿಹಾಸದಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆಯಲಿದ್ದಾರೆ.













































































































































































error: Content is protected !!
Scroll to Top