ಮನೆ ಯಜಮಾನನನ್ನು ಕಟ್ಟಿ ಹಾಕಿ ನಗ-ನಗದು ದರೋಡೆ

ಪುತ್ತೂರು ಸಮೀಪ ಬಡಗನ್ನೂರಿನ ಕುಸ್ಕಾಡಿಯಲ್ಲಿ ನಡೆದ ಘಟನೆ

ಪುತ್ತೂರು : ದರೋಡೆಕೋರರ ತಂಡವೊಂದು ಮನೆ ಮಂದಿಯನ್ನು ಕಟ್ಟಿ ಹಾಕಿ ನಗ-ನಗದು ದರೋಡೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕುಸ್ಕಾಡಿ ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮತ್ತು ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಎಂಬವರ ಮನೆಯಲ್ಲಿ ಈ ದರೋಡೆ ನಡೆದಿದ್ದು ತಡರಾತ್ರಿ ಸುಮಾರು 2 ಗಂಟೆಗೆ ಮನೆಯ ಮುಂದಿನ ಬಾಗಿಲ ಮೂಲಕ ಮನೆಯೊಳಗೆ ನುಗ್ಗಿದ ಸುಮಾರು 8 ಜನರಿದ್ದ ಮುಸುಕುಧಾರಿಗಳ ತಂಡ ಗುರುಪ್ರಸಾದ್ ಅವರನ್ನು ಕಟ್ಟಿ‌ ಹಾಕಿ, ಕುತ್ತಿಗೆಗೆ ಚಾಕು ಹಿಡಿದು ಕಪಾಟಿನಲ್ಲಿದ್ದ 40 ಸಾವಿರ ರೂ. ಮತ್ತು ಸುಮಾರು 15 ಪವನ್ ಚಿನ್ನ ದರೋಡೆ ಮಾಡಿದೆ.
ಮನೆಯೊಳಗೆ‌ ನುಗ್ಗಿದ ದರೋಡೆಕೋರರ ತಂಡ ಸುಮಾರು ಒಂದೂವರೆ ಗಂಟೆ ಮನೆಯೊಳಗೆ ಇದ್ದು, ಮನೆಯ ಎಲ್ಲ ಕಡೆಗಳಲ್ಲೂ ಹುಡುಕಾಡಿದೆ. ತುಳು ಮತ್ತು ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದ ದರೋಡೆಕೋರರ ತಂಡ ಹಿಂಬಾಗಿಲಿನಿಂದ ಹೊರಗೆ ಹೋಗಿ ತಪ್ಪಿಸಿಕೊಂಡಿದೆ. ಹೊರಗೆ ಹೋಗುವ ಸಮಯದಲ್ಲಿ ಗುರುಪ್ರಸಾದ್ ಅವರ ಕಟ್ಟಿದ‌ ಕೈಗಳನ್ನು ಬಿಚ್ಚಿ ದರೋಡೆಕೋರರು ಪರಾರಿಯಾಗಿದ್ದು, ಗುರುಪ್ರಸಾದ್ ಮೊಬೈಲ್ ಅನ್ನು ನೀರಿಗೆ ಹಾಕಿ ಹಾನಿ ಮಾಡಿದ್ದಾರೆ.
ಘಟನೆಯ ಬಗ್ಗೆ ಗುರುಪ್ರಸಾದ್ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಡಾ. ಚಂದ್ರಗುಪ್ತ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ‌.ಬಿ.ರಿಷ್ಯಂತ್ ಸೇರಿದಂತೆ ಹಲವು‌ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆರಳಚ್ಚು ತಜ್ಞರ ತಂಡ, ಶ್ವಾನದಳ, ವಿಧಿವಿಜ್ಞಾನ ತಂಡ ಪರಿಶೀಲನೆ ನಡೆಸಿದೆ.
ಮನೆಯಲ್ಲಿ ಗುರುಪ್ರಸಾದ್ ರೈ ಹೆಚ್ಚಾಗಿ ಒಬ್ಬರೇ ಇರುತ್ತಾರೆ. ನಿನ್ನೆ ತಾಯಿ ಪಕ್ಕದ ಮನೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದು ಮನೆಯಲ್ಲಿ ತಂಗಿದ್ದರು. ಆ ಕಾರಣ ಅವರ ಚಿನ್ನದ ಜತೆಗೆ ಕಪಾಟಿನಲ್ಲಿದ್ದ 25 ಸಾವಿರ ಮತ್ತು ಗುರುಪ್ರಸಾದ್‌ ಪರ್ಸ್‌ನಲ್ಲಿದ್ದ ಹಣವನ್ನು ದರೋಡೆಕೋರರು ದರೋಡೆ ಮಾಡಿದ್ದಾರೆ.
ದರೋಡೆ ನಡೆದ ಮನೆಯ ಅಕ್ಕಪಕ್ಕ ಮನೆಗಳಿಲ್ಲ. ಇಂಥ ಮನೆಯನ್ನೇ ಗುರಿ ಮಾಡಿಕೊಮಡಿರುವುದನ್ನು ನೋಡುವಾಗ ಈ ಪರಿಸರದ ಬಗ್ಗೆ ಚೆನ್ನಾಗಿ ತಿಳಿದವರ ಕೃತ್ಯವಾಗಿಬೇಕೆಂದು ಅನುಮಾನಿಸಲಾಗಿದೆ.































































































































































error: Content is protected !!
Scroll to Top