ಲೋಕಸಭೆ ಚುನಾವಣೆಯಲ್ಲಿ ಜತೆಯಾಗಿ ಹೋರಾಡಲು ದಿಲ್ಲಿಯಲ್ಲಿ ನಿರ್ಧಾರ
ಹೊಸದಿಲ್ಲಿ : ಕರ್ನಾಟಕದಲ್ಲಿ ಬಿಜೆಪಿ-ಜನತಾ ದಳ (ಎಸ್) ಮೈತ್ರಿಗೆ ದಿಲ್ಲಿಯಲ್ಲೇ ಅಂಕಿತ ಬಿದ್ದಿದೆ ಎಂದು ಮೂಲವೊಂದು ತಿಳಿಸಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಜತೆಯಾಗಿ ಹೋರಾಡಲು ಎರಡೂ ಪಕ್ಷಗಳು ತಾತ್ವಿಕವಾಗಿ ಒಪ್ಪಿಕೊಂಡಿವೆ. ಇತ್ತೀಚೆಗೆ ಜೆಡಿಎಸ್ ವರಿಷ್ಠ ದೇವೇಗೌಡ ದಿಲ್ಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ರಹಸ್ಯವಾಗಿ ಭೇಟಿ ಮಾಡಿದ್ದು, ಈ ಸಂದರ್ಭ ಮೈತ್ರಿ ಮಾತುಕತೆ ನಡೆದಿದೆ.
ಜೆಡಿಎಸ್ ಅನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವುದಕ್ಕೆ ಬಿಜೆಪಿ ವರಿಷ್ಠರು ಹೆಚ್ಚು ಉತ್ಸುಕರಾಗಿದ್ದರು. ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿಗೆ ವಿಪಕ್ಷ ನಾಯಕ ಸ್ಣಾನದ ಕೊಡುಗೆಯನ್ನೂ ಬಿಜೆಪಿ ನೀಡಿತ್ತು. ಆದರೆ ಇದಕ್ಕೆ ದೇವೇಗೌಡರು ಒಪ್ಪಿರಲಿಲ್ಲ. ಹೀಗಾಗಿ ಚುನಾವಣಾ ಮೈತ್ರಿ ಏರ್ಪಟ್ಟಿದೆ.
ದೇವೆಗೌಡರು ಐದು ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದು, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಇನ್ನೂ ಹಲವು ಸುತ್ತಿನ ಮಾತುಕತೆಗಳು ಇದ್ದರೂ ಎರಡು ಪಕ್ಷಗಳು ಜತೆಯಾಗಿ ಸ್ಪರ್ಧಿಸುವುದು ಖಚಿತ ಎಂದು ಮೂಲಗಳು ಹೇಳಿವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೊಟ್ಟ ಹೊಡೆತದಿಂದ ಎರಡೂ ಪಕ್ಷಗಳು ಸಾಕಷ್ಟು ಬಳಲಿವೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಗೆ ಒಂದಾಗಳು ತೀರ್ಮಾನಿಸಿವೆ.
ಮಂಡ್ಯ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಕ್ಷೇತ್ರಗಳನ್ನು ಜೆಡಿಎಸ್ ಕೇಳಿದೆ. ಈ ಪೈಕಿ ಬೆಂಗಳೂರು ಹೊರತುಡಿಸಿ ಉಳಿದೆಡೆ ಬಿಜೆಪಿ ಅಷ್ಟು ಪ್ರಬಲವಾಗಿಲ್ಲ. ಹೀಗಾಗಿ ಸೀಟು ಹಂಚಿಕೆ ದೊಡ್ಡ ತಲೆನೋವಾಗದು ಎಂದು ನಿರೀಕ್ಷಿಸಲಾಗಿದೆ.
ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, 2019ರಲ್ಲಿ ಬಿಜೆಪಿ 25ನ್ನು ಗೆದ್ದಿತ್ತು. ದೇವೆಗೌಡರೇ ಈ ಚುನಾವಣೆಯಲ್ಲಿ ಸೋತಿದ್ದರು. ಜೆಡಿಎಸ್‌ನಿಂದ ಗೆದ್ದಿದ್ದ ಏಕೈಕ ಸಂಸದ ಪ್ರಜ್ವಲ್ ರೇವಣ್ಣ ಇತ್ತೀಚೆಗೆ ಅನರ್ಹಗೊಂಡಿದ್ದಾರೆ.
ಯಾವ ಪಕ್ಷದ ಜತೆಗೂ ಮೈತ್ರಿ ಮಾಡುವುದಿಲ್ಲ ಎಂದು ಹೇಳಿಕೊಂಡೇ ದೇವೆಗೌಡ ರಹಸ್ಯವಾಗಿ ಮೈತ್ರಿ ಮಾತುಕತೆ ನಡೆಸಿದ್ದಾರೆ.