ಬ್ಯಾಂಕ್ ಅಧಿಕಾರಿಗಳಿಗೆ ಕನ್ನಡ ಕಡ್ಡಾಯಗೊಳಿಸಲು ರಾಜ್ಯ ಸರಕಾರ ಚಿಂತನೆ

ಬೆಂಗಳೂರು : ಬ್ಯಾಂಕ್ ಸಿಬ್ಬಂದಿ ಇನ್ನು ಮುಂದೆ ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಕರ್ನಾಟಕ ಸರಕಾರ ಅಧಿಸೂಚನೆ ಹೊರಡಿಸುವ ನಿರೀಕ್ಷೆಯಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ (ಕೆಡಿಎ) ಕಾರ್ಯದರ್ಶಿ ಸಂತೋಷ ಹಂಗಲ್ ತಿಳಿಸಿದ್ದಾರೆ.

ಸ್ಥಳೀಯ ಭಾಷೆ ತಿಳಿದಿಲ್ಲದ ಬ್ಯಾಂಕ್ ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ಹಳ್ಳಿಯ ಜನರು ಸಮಸ್ಯೆ ಎದುರಿಸುತ್ತಿದ್ದು, ಬ್ಯಾಂಕ್‌ ಅಧಿಕಾರಿಗಳಿಗೆ ಕನ್ನಡ ಕಡ್ಡಾಯ ಮಾಡಬೇಕು ಎಂಬುದು ರಾಜ್ಯದ ಬಹು ಜನರ ಅಪೇಕ್ಷೆಯಾಗಿತ್ತು. ಈ ಬೇಡಿಕೆಗೆ ಮನ್ನಣೆ ನೀಡಲು ಹೊರಟಿರುವ ಸರಕಾರ ಅಧಿಸೂಚನೆ ಹೊರಡಿಸಲು ಮುಂದಾಗಿದೆ.

ಈ ವರ್ಷದ ಮಾರ್ಚ್‌ನಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ- 2022ನ್ನು ಅಂಗೀಕರಿಸಲಾಗಿದ್ದು, ಸರಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಯನ್ನು ಉತ್ತೇಜಿಸುವುದು ಮಸೂದೆಯ ಉದ್ದೇಶಗಳಲ್ಲಿ ಒಂದಾಗಿದೆ. ರಾಜ್ಯ ಸರಕಾರ, ಸ್ಥಳೀಯ ಸಂಸ್ಥೆಗಳು, ಮಂಡಳಿಗಳು, ನಿಗಮಗಳು ಮತ್ತು ಶಾಸನಬದ್ಧ ಅಥವಾ ಶಾಸನಬದ್ಧವಲ್ಲದ ಸಂಸ್ಥೆಗಳಲ್ಲಿನ ಉದ್ಯೋಗಗಳಿಗೆ ಕನ್ನಡ ಭಾಷೆಯ ಜ್ಞಾನವು ಅತ್ಯಗತ್ಯ, ಎಂದು ಈ ಮಸೂದೆಯಲ್ಲಿ ಹೇಳಲಾಗಿದೆ.

ಕನ್ನಡೇತರ ಉದ್ಯೋಗಿಗಳಿಗಾಗಿ ಬ್ಯಾಂಕ್‌ಗಳು ‘ಕನ್ನಡ ಕಲಿಕಾ ಘಟಕ’ (ಮೂಲ ಕನ್ನಡ ಬೋಧನಾ ಘಟಕ) ಸ್ಥಾಪಿಸಬೇಕು ಮತ್ತು ಸರಕಾರವು ತಾನೇ ಅಗತ್ಯ ಬೋಧಕ ಸಿಬ್ಬಂದಿ ಮತ್ತು ಅಧ್ಯಯನ ಸಾಮಗ್ರಿಗಳನ್ನು ನೀಡುತ್ತದೆ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕದಲ್ಲಿ ಗ್ರಾಹಕರಿಗೆ ಸೇವೆ ನೀಡಲು ಬ್ಯಾಂಕ್ ನೌಕರರು ಕನ್ನಡ ಕಲಿಯಬೇಕು ಎಂಬುದನ್ನು ಸರಕಾರ ಹಿಂದಿನಿಂದಲೂ ಪ್ರತಿಪಾದಿಸುತ್ತಲೇ ಬಂದಿದೆ. ಆಗಸ್ಟ್ 2017ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು (ಕೆಡಿಎ) ತನ್ನ ಆದೇಶದಲ್ಲಿ, ರಾಜ್ಯದಲ್ಲಿ ಕೆಲಸ ಮಾಡುವ ಎಲ್ಲಾ ರಾಷ್ಟ್ರೀಕೃತ, ಗ್ರಾಮೀಣ ಬ್ಯಾಂಕ್‌ಗಳ ಕನ್ನಡೇತರ ನೌಕರರು ಆರು ತಿಂಗಳಲ್ಲಿ ಕನ್ನಡ ಭಾಷೆಯನ್ನು ಕಲಿಯಬೇಕು ಅಥವಾ ರಾಜ್ಯ ತೊರೆಯಬೇಕು ಎಂದು ಸೂಚಿಸಿತ್ತು.

ಭಾಷೆಯ ಅನುಷ್ಠಾನಕ್ಕಾಗಿ ಅಸ್ತಿತ್ವದಲ್ಲಿರುವ ಹಿಂದಿ ಘಟಕಗಳಿಗೆ ಅನುಗುಣವಾಗಿ ರಾಜ್ಯದ ಎಲ್ಲಾ ಶಾಖೆಗಳಲ್ಲಿ ಕನ್ನಡ ಘಟಕಗಳನ್ನು ಸ್ಥಾಪಿಸಲು ಪ್ರಾಧಿಕಾರವು ಬ್ಯಾಂಕ್‌ಗಳಿಗೆ ಸೂಚನೆ ನೀಡಿತ್ತು. ಆಗಿನ ಕೆಡಿಎ ಅಧ್ಯಕ್ಷರು, ಬ್ಯಾಂಕ್‌ಗಳು ಎಲ್ಲಾ ಜಾಹೀರಾತುಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಕನ್ನಡದ ತ್ರಿಭಾಷಾ ಸೂತ್ರವನ್ನು ಅನುಸರಿಸುವುದು ಮುಖ್ಯ ಎಂದು ಹೇಳಿದ್ದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೊದಲ ಅವಧಿಯಲ್ಲಿ ಈ ನಿರ್ದೇಶನ ಬಂದಿತ್ತು. ಆ ವರ್ಷದ ಜುಲೈನಲ್ಲಿ ಅವರು ಹೊರ ರಾಜ್ಯದ ಜನರು ಕನ್ನಡ ಸಂಸ್ಕೃತಿಗೆ ಹೊಂದಿಕೊಳ್ಳುವಂತೆ ಆಗ್ರಹಿಸಿದ್ದರು. ನಮ್ಮ ಭಾಷೆ, ನೆಲ, ಜಲದ ಮೇಲಿನ ಯಾವುದೇ ದಾಳಿಯನ್ನು ನಾವು ಸಹಿಸುವುದಿಲ್ಲ, ಕನ್ನಡ ನೆಲ ಮತ್ತು ಕನ್ನಡಿಗರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಅವರು ಆ ಸಂದರ್ಭದಲ್ಲಿ ಒತ್ತಿ ಹೇಳಿದ್ದಾರು.































































































































































error: Content is protected !!
Scroll to Top