ಕಾರ್ಕಳ ಶಾಸಕರ ಮೌನ ಸಂಶಯಕ್ಕೆ ಕಾರಣವಾಗುತ್ತಿದೆ – ಶುಭದ ರಾವ್
ಉಡುಪಿ : ಬೈಲೂರು ಉಮಿಕ್ಕಳ್ ಬೆಟ್ಟದಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್ ಪಾರ್ಕ್‌ನಲ್ಲಿರುವ ಪರಶುರಾಮನ ಮೂರ್ತಿ ಕಂಚಿನದ್ದೇ ಎಂಬ ಅನುಮಾನವಿದ್ದು, ಈ ಕುರಿತು ಅಧಿಕಾರಿಗಳು ಸಮರ್ಪಕವಾಗಿ ಉತ್ತರಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.
ಸೆ. 8 ರಂದು ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಒಟ್ಟು 14.42 ಕೋಟಿ ರೂ. ವೆಚ್ಚದ ಯೋಜನೆಯಾಗಿದೆ. ಈಗಾಗಲೇ 6.72 ಕೋಟಿ ರೂ. ಪಾವತಿಯಾಗಿದೆ. ಅವುಗಳ ಪೈಕಿ 2 ಕೋಟಿ ರೂ. ಯಾವುದಕ್ಕೆ ಪಾವತಿಯಾಗಿದೆ ಎಂಬ ದಾಖಲಾತಿಗಳು ಇಲ್ಲ. ಇನ್ನು 33 ಅಡಿ ಎತ್ತರದ 15 ಟನ್ ಭಾರದ ಪರಶುರಾಮ ಪ್ರತಿಮೆ ನಿರ್ಮಾಣಕ್ಕೆ ಆದೇಶ ನೀಡಲಾಗಿದೆ. ಆದರೆ, ಕಾರ್ಯಾದೇಶದ ಮೊದಲೇ ಮೂರ್ತಿ ರಚನೆಗೆ 1 ಕೋಟಿ ಪಾವತಿಸಲಾಗಿದೆ. ಅಸಲಿಗೆ ಈ ಮೂರ್ತಿ ನಕಲಿಯಾಗಿದ್ದು, ತಕ್ಷಣವೆ ಈ ಬಗ್ಗೆ ತನಿಖೆ ನಡೆಯಲಿ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.
ಥೀಮ್ ಪಾರ್ಕ್‌ನ ಉದ್ಘಾಟನೆಯನ್ನು ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ನೆರವೇರಿಸಿದ್ದಾರೆ. ಉದ್ಘಾಟನೆಗೆ 2.18 ಕೋಟಿ ರೂ. ಖರ್ಚು ಮಾಡಲಾಗಿದೆ. ಅದರಲ್ಲೂ 60 ಲಕ್ಷ ರೂ.ಗೆ ಪಾವತಿಯಾದ ಬಿಲ್ಲುಗಳು ಲಭ್ಯವಾಗುತ್ತಿಲ್ಲ ಎಂದು ಹೇಳಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಮಾತನಾಡಿ, ಕಾರ್ಕಳದ ಶಾಸಕ, ಮಾಜಿ ಸಚಿವ ಸುನಿಲ್ ಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ. ಅವರ ಮೌನ ಇನ್ನಷ್ಟು ಸಂಶಯಗಳಿಗೆ ಎಡೆ ಮಾಡಿದೆ. ಪರಶುರಾಮ ಥೀಮ್ ಪಾರ್ಕ್‌ನ ಬಗ್ಗೆ ಸೂಕ್ತ ತನಿಖೆ ಆಗುವವರಗೆ ಅಲ್ಲಿ ಯಾವುದೇ ಕಾಮಗಾರಿ ನಡೆಸಬಾರದು. ಈ ಕುರಿತು ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೂ ಇದನ್ನು ತಂದಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಕೆಎಂಎಫ್ ನಿರ್ದೇಶಕ ಸುಧಾಕರ್ ಶೆಟ್ಟಿ ಮುಡಾರು, ಪುರಸಭಾ ಮಾಜಿ ಅಧ್ಯಕ್ಷರಾದ ಸುಬಿತ್ ಎನ್. ಆರ್ ಉಪಸ್ಥಿತರಿದ್ದರು.