ಹೇಳಿಕೆ ತಿರುಚಿದ ಆರೊಪ ಹೊರಿಸಿ ತಮಿಳುನಾಡಿನಲ್ಲಿ ಎಫ್‌ಐಆರ್
ಚೆನ್ನೈ : ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿದ ಹೇಳಿಕೆಯಿಂದ ಸೃಷ್ಟಿಯಾಗಿರುವ ವಿವಾದದ ಕಿಚ್ಚು ತೀವ್ರಗೊಂಡಿದ್ದು, ಇದೀಗ ತಮಿಳುನಾಡು ಪೊಲೀಸರು ಈ ಹೇಳಿಕೆಗೆ ಸಂಬಂಧಿಸಿ ಟ್ವೀಟ್ ಮಾಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.
ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದ ಉದಯನಿಧಿ ಸ್ಟಾಲಿನ್ ಹೇಳಿಕೆ ಜನಾಂಗೀಯ ಹತ್ಯೆಗೆ ನೀಡಿದ ಕರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವ್ಯಾಖ್ಯಾನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಸನಾತನ ಧರ್ಮ ಕುರಿತು ಉದಯನಿಧಿ ಸ್ಟಾಲಿನ್ ಹೇಳಿಕೆ ಅದನ್ನು ಅನುಸರಿಸುವ ಶೇ.80 ಜನರ ಜನಾಂಗೀಯ ಹತ್ಯೆಗೆ ನೀಡಿದ ಕರೆಯಾಗಿದೆ ಎಂದು ಅಮಿತ್ ಮಾಳವೀಯ ಎಕ್ಸ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ್ದ ಉದಯನಿಧಿ ಸ್ಟಾಲಿನ್ ಅವರು ಬಳಿಕ ರಾಜಕೀಯ ಉದ್ದೇಶದ ಸ್ಪಷ್ಟನೆ ನೀಡಿದ್ದರೂ, ಎರಡು ಗುಂಪುಗಳ ನಡುವೆ ಹಿಂಸಾಚಾರ ಮತ್ತು ದ್ವೇಷವನ್ನು ಹುಟ್ಟುಹಾಕಲು ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಉದ್ದೇಶದಿಂದ ಅಮಿತ್ ಮಾಳವೀಯ ಅವರು ಸಚಿವ ಉದಯನಿಧಿ ಸ್ಟಾಲಿನ್ ಮಾಡಿದ ಭಾಷಣವನ್ನು ಉದ್ದೇಶಪೂರ್ವಕವಾಗಿ ತಿರುಚಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.