ಜಲಾಶಯಗಳಲ್ಲಿ 110 ದಿನಗಳಿಗೆ ಸಾಕಾಗುವಷ್ಟು ಮಾತ್ರ ನೀರು ಸಂಗ್ರಹ
ವಿದ್ಯುತ್ ಖರೀದಿಗೆ ಸಂಪನ್ಮೂಲ ಕೊರತೆ
ಬೆಂಗಳೂರು : ಮಳೆ ಕೈಕೊಟ್ಟ ಪರಿಣಾಮವಾಗಿ ಅಣೆಕಟ್ಟೆಗಳಲ್ಲಿ ನೀರು ಸಂಗ್ರಹ ಕಡಿಮೆಯಾಗಿರುವುದರಿಂದ ವಿದ್ಯುತ್ ಉತ್ಪಾದನೆ ಕುಂಠಿತವಾಗಿದ್ದು, ಮುಂದಿನ ದಿನಗಳಲ್ಲಿ ಲೋಡ್‌ಶೆಡ್ಡಿಂಗ್‌ನ ಕರಾಳ ಭೀತಿ ಎದುರಾಗಿದೆ.
ಕಳೆದ ಹಲವಾರು ವರ್ಷಗಳಿಂದ ಕರ್ನಾಟಕದಲ್ಲಿ ವಿದ್ಯುತ್ ಪೂರೈಕೆ ಪರಿಸ್ಥಿತಿ ಸಾಕಷ್ಟು ಸುಧಾರಿಸಿತ್ತು. ಧಾರಾಳ ವಿದ್ಯುತ್ ಉತ್ಪಾದನೆಯಾಗುತ್ತಿದ್ದ ಕಾರಣ ಜನರು ನಿಶ್ಚಿಂತೆಯಿಂದ ವಿದ್ಯುತ್ ಬಳಸುತ್ತಿದ್ದರು. ಆದರೆ ಬಹಳ ವರ್ಷಗಳ ಬಳಿಕ ಈ ಸಲ ಮುಂಗಾರು ಪೂರ್ತಿಯಾಗಿ ಕೈ ಕೊಟ್ಟಿದ್ದು, ಜಲಾಶಯಗಳ ಸ್ಥಿತಿ ಶೋಚನೀಯವಾಗಿದೆ. ಹೀಗಾಗಿ ಈ ಸಲ ಲೋಡ್‌ಶೆಡ್ಡಿಂಗ್ ಅನಿವಾರ್ಯವಾಗಬಹುದು ಎಂಬ ಸೂಚನೆಯನ್ನು ಕೆಲವು ದಿನಗಳ ಹಿಂದೆಯೇ ಇಂಧನ ಸಚಿವ ಕೆ. ಜೆ. ಜಾರ್ಜ್ ನೀಡಿದ್ದಾರೆ.
ಜನತೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಗ್ಯಾರಂಟಿಗೂ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಬೇರೆ ಕಡೆಯಿಂದ ವಿದ್ಯುತ್ ಖರೀದಿ ಮಾಡುವುದು ಆರ್ಥಿಕವಾಗಿ ಹೊರೆಯಾಗುತ್ತದೆ. ಉಚಿತ ಕೊಡುಗೆಗಳ ಭರಾಟೆ ಇರುವಾಗ ವಿದ್ಯುತ್ ಖರೀದಿಗೆ ಹಣ ಹೊಂದಿಸುವುದು ಸರಕಾರಕ್ಕೆ ಕಷ್ಟವಾಗಬಹುದು. ಹೀಗಾಗಿ ಮಳೆ ಸ್ಥಿತಿ ಇದೇ ರೀತಿ ಮುಂದುವರಿದರೆ ರಾಜ್ಯ ಕಗ್ಗತ್ತಲ್ಲಿನತ್ತ ಸಾಗುವುದು ಗ್ಯಾರಂಟಿ ಎನ್ನಲಾಗುತ್ತದೆ.
ಜಲವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಮುಂದಿನ110 ದಿನ ಮಾತ್ರ ವಿದ್ಯುತ್ ಉತ್ಪಾದಿಸಬಹುದಾದಷ್ಟು ನೀರು ಇದೆ. ಹೀಗಾಗಿ ಪರಿಸ್ಥಿತಿ ಸಾಕಷ್ಟು ಕಠೋರವಾಗಿದೆ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯವು ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಮೂಲಗಳು 11,000 ಮೆಗಾವಾಟ್‌ಗಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದರೂ ಈಗ 4,000 ಮೆಗಾವಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ರಾಜ್ಯದಲ್ಲಿನ ಜಲವಿದ್ಯುತ್ ಜಲಾಶಯಗಳು ಅರ್ಧದಷ್ಟು ಕೂಡ ಭರ್ತಿಯಾಗದ ಕಾರಣ ಜಲಾಶಯಗಳಲ್ಲಿನ ಪ್ರಸ್ತುತ ನೀರಿನ ಮಟ್ಟವು ಇನ್ನೂ 110 ದಿನಗಳವರೆಗೆ ಮಾತ್ರ ವಿದ್ಯುತ್ ಉತ್ಪಾದನೆಗೆ ಸಾಕಾಗುತ್ತದೆ.
ಉಷ್ಣ ವಿದ್ಯುತ್ ಸ್ಥಾವರಗಳಿದ್ದರೂ ಕಲ್ಲಿದ್ದಲು ಪೂರೈಕೆ ಸಮಸ್ಯೆ ಸದಾ ಇದೆ. ಸರ್ಕಾರಿ ಸ್ವಾಮ್ಯದ ಬಳ್ಳಾರಿ, ರಾಯಚೂರು ಮತ್ತು ಯಮರಸ್ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಕೊರತೆ ಎದುರಿಸುತ್ತಿವೆ.