ಪರಶುರಾಮ ಮೂರ್ತಿಯ ಪರಿಶುದ್ಧತೆಗಾಗಿ ಸತ್ಯಾಗ್ರಹ – ಸ್ಥಳಕ್ಕೆ ಭೇಟಿ ನೀಡಿದ ಎಸಿ

ನಿಯಮದನ್ವಯವೇ ಪ್ರತಿಮೆ ಪರಿಶೀಲನೆ – ಭರವಸೆ

ಕಾರ್ಕಳ : ಬೈಲೂರು ಪರಶುರಾಮ ಮೂರ್ತಿಯ ಪರಿಶುದ್ಧತೆಯ ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿ ದಿವ್ಯಾ ನಾಯಕ್‌ ನೇತೃತ್ವದ ತಂಡ ಕಳೆದ 6 ದಿನಗಳಿಂದ ಕಾರ್ಕಳ ತಾಲೂಕು ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಸೆ. 7 ರಂದು ಕುಂದಾಪುರ ಸಹಾಯಕ ಆಯುಕ್ತರಾದ ರಶ್ಮಿ ಅವರು ಸತ್ಯಾಗ್ರಹ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭ ಹೋರಾಟಗಾರರ ಬಳಿ ಮಾತನಾಡಿದ ಅವರು ಪ್ರತಿಯೊಂದು ಯೋಜನೆ ಕಾಮಗಾರಿ ಪೂರ್ಣಗೊಂಡ ಬಳಿಕ ಥರ್ಡ್‌ ಪಾರ್ಟಿಯಿಂದ ಗುಣಮಟ್ಟದ ಪರಿಶೀಲನೆ ನಡೆಯುತ್ತದೆ. ಅಂತೆಯೇ ಒಂದು ತಿಂಗಳೊಳಗಾಗಿ ಈ ಮೂರ್ತಿಯ ಪರಿಶೀಲನೆಯಾಗಲಿದೆ ಎಂದು ತಿಳಿಸಿ, ಉಪವಾಸ ಕೈ ಬಿಡುವಂತೆ ಮನವಿ ಮಾಡಿಕೊಂಡರು. ಈ ವೇಳೆ ಪ್ರತಿಭಟನಕಾರ ಚಿತ್ತರಂಜನ್‌ ಶೆಟ್ಟಿ ಅವರು ಪರಿಶೀಲನೆಯ ಕುರಿತು ಇಂದು ಸಂಜೆಯೊಳಗೆ ಜಿಲ್ಲಾಧಿಕಾರಿಯವರಿಂದ ಪತ್ರಿಕಾ ಹೇಳಿಕೆ ಬಂದಲ್ಲಿ ಮಾತ್ರ ಉಪವಾಸ ಸತ್ಯಾಗ್ರಹ ಕೈಬಿಡುವುದಾಗಿ ಹೇಳಿದರು.

ಎಸಿ ಅವರು ಆರಂಭದಲ್ಲಿ ಎರಡು ತಿಂಗಳೊಳಗೆ ಪರಿಶೀಲನೆ ನಡೆಸುವುದಾಗಿ ಹೇಳಿದಾಗ ಒಪ್ಪದ ಪ್ರತಿಭಟನಕಾರರು, 2 ತಿಂಗಳ ಅವಧಿ ಮೂರ್ತಿ ಬದಲಾವಣೆಗಾಗಿಯೇ ? ಎಂದು ಪ್ರಶ್ನಿಸಿದರು. ಬಳಿಕ ಎಸಿ ಅವರು ಒಂದು ತಿಂಗಳ ಅವಧಿಯಲ್ಲಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು. 15 ದಿನದೊಳಗೆ ಒಂದು ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂದಾದರೆ ಅದೇ ಮೂರ್ತಿಯನ್ನು ಒಂದು ವಾರದೊಳಗೆ ಪರಿಶೀಲನೆ ನಡೆಸಲು ಸಾಧ್ಯವಿಲ್ಲವೇ ? ಎಂದು ಸತ್ಯಾಗ್ರಹಿ ವಿವೇಕ್‌ ಶೆಟ್ಟಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಸಿಯವರು ಯಾವುದೇ ಒಂದು ನಿರ್ಧಾರವನ್ನು ತಕ್ಷಣವೇ ತೆಗೆದುಕೊಳ್ಳಲು ಸಾಧ್ಯವಿಲ್ಲ. ಜಿಲ್ಲಾಡಳಿತ ಸಭೆ ನಡೆಸಿ ತಿರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಕಾಂಗ್ರೆಸ್‌ ಮುಖಂಡ ಉದಯ ಕುಮಾರ್‌ ಶೆಟ್ಟಿ ಮಾತನಾಡಿ, ಪರಶುರಾಮ ಥೀಮ್‌ ಪಾರ್ಕ್‌ನಲ್ಲಿ ಮೂರ್ತಿಯ ಪರಿಶೀಲನೆಯಾಗಬೇಕು. ಅಲ್ಲದೆ ಈ ಪರಿಶೀಲನೆಯಾಗುವವರೆಗೆ ಅಲ್ಲಿ ಯಾವುದೇ ಕಾಮಗಾರಿಗೆ ಅವಕಾಶ ನೀಡಬಾರದು ಮತ್ತು ಅಲ್ಲಿ ಸಿಸಿ ಕ್ಯಾಮರ ಅಳವಡಿಸುವ ಕಾರ್ಯವಾಗಬೇಕೆಂದರು.

ಬ್ಲಾಕ್‌ ಕಾಂಗ್ರೆಸ್‌ ವಕ್ತಾರ ಶುಭದ ರಾವ್‌, ಮಹಿಳಾ ಘಟಕದ ನಗರಾಧ್ಯಕ್ಷೆ ಕಾಂತಿ ಶೆಟ್ಟಿ, ಪುರಸಭಾ ಸದಸ್ಯೆ, ಮಾಜಿ ಅಧ್ಯಕ್ಷೆ ಪ್ರತಿಮಾ ರಾಣೆ, ಮಾಜಿ ಅಧ್ಯಕ್ಷ ಸುಬಿತ್‌ ಎನ್.ಆರ್.‌, ಆರಿಫ್‌ ಕಲ್ಲೊಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡವರು


error: Content is protected !!
Scroll to Top