ನೆಕ್ಲಾಜೆ ಪರಿಸರದಲ್ಲಿ ಚಿರತೆ ಹಾವಳಿ – ಆತಂಕದಲ್ಲಿ ಸಾರ್ವಜನಿಕರು

ಕಾರ್ಕಳ : ಪುರಸಭಾ ವ್ಯಾಪ್ತಿಯ ನೆಕ್ಲಾಜೆ ಕಾಳಿಕಾಂಬ ಪರಿಸರದಲ್ಲಿ ಚಿರತೆ ಹಾವಳಿಯಿದ್ದು, ಜನ ಆತಂಕಕ್ಕೀಡಾಗಿದ್ದಾರೆ. ಮಂಗಳವಾರ ಮಧ್ಯಾಹ್ಯ ಕಾಳಿಕಾಂಬಾ ದೇವಸ್ಥಾನ ಸಮೀಪದ ಜ್ಯೋತಿ ರಸ್ತೆಯಲ್ಲಿ ಚಿರತೆ ಪತ್ತೆಯಾಗಿದೆ. ಮಹಿಳೆಯರು ಚಿರತೆಯನ್ನು ನೋಡಿದ್ದು ಭಯಭೀತರಾಗಿದ್ದಾರೆ.

ಏಪ್ರಿಲ್‌ನಲ್ಲಿ ಇದೇ ಪರಿಸರದಲ್ಲಿ ಚಿರತೆ ಹಾವಳಿಯಿದ್ದು, ಎರಡು ಚಿರತೆಗಳು ನಾಯಿಯ ಭೇಟೆಗೆ ಪ್ರಯತ್ನಿಸಿದ್ದು ನಾಯಿಗಳು ಪ್ರಾಣಾಪಾಯದಿಂದ ತಪ್ಪಿಸಿಕೊಂಡ ಘಟನೆ ಸಂಭವಿಸಿತ್ತು. ಅಲ್ಲದೆ ಈ ಸಂದರ್ಭ ಸಾರ್ವಜನಿಕರು ನೀಡಿದ ದೂರಿಗೆ ಸ್ಪಂದಿಸಿದ ಅರಣ್ಯ ಇಲಾಖೆಯವರು ಚಿರತೆ ಹಿಡಿಯಲು ಬೋನ್‌ ಇರಿಸಿದ್ದರು.

ಕಾರ್ಕಳದಲ್ಲಿ ಹೆಚ್ಚುತ್ತಿರುವ ಚಿರತೆ ಕಾಟ
ತಾಲೂಕಿನೆಲ್ಲೆಡೆ ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ವಾರವಷ್ಟೇ ಸಾಣೂರು ಪರಿಸರದಲ್ಲಿ ಚಿರತೆ ಪತ್ತೆಯಾಗಿತ್ತು. ಇಲ್ಲಿನ ಮುದ್ದಣ ನಗರ ಶಾಲಾ ಬಳಿ ಚಿರತೆಗಳೆರಡು ಕಾಳಗ ನಡೆಸಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕಳೆದ ವರ್ಷ ಕೆರ್ವಾಶೆ ಶೆಟ್ಟಿಬೆಟ್ಟು ಪರಿಸರದಲ್ಲಿ ಜಾನುವಾರೊಂದನ್ನು ಚಿರತೆ ಬಲಿ ಪಡೆದಿತ್ತು. ಮಾರ್ಚ್‌ನಲ್ಲಿ ನೀರೆ ಗ್ರಾ. ಪಂ. ನ ಬಾರೆಜಡ್ಡು ಎಂಬಲ್ಲಿ ಚಿರತೆ ದಾಳಿಗೆ ದನವೊಂದು ಬಲಿಯಾಗಿದೆ. ಜನವರಿಯಲ್ಲಿ ಕಣಜಾರು ಪರಿಸರದಲ್ಲಿ ಓಡಾಡುತ್ತಿದ್ದ ಚಿರತೆಯನ್ನು ಬೋನು ಇರಿಸಿ ಹಿಡಿಯುವಲ್ಲಿ ಕಾರ್ಕಳ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದರು.
ಕಣಜಾರು, ಪಳ್ಳಿ, ನೀರೆ ಬೈಲೂರು, ಕಾಂತಾವರ, ಬೆಳ್ಮಣ್‌, ಮುಡಾರು, ಮುಂಡ್ಲಿ, ಹೆಬ್ರಿ ತಾಲೂಕಿನ ವರಂಗ, ಮುನಿಯಾಲು, ಅಂಡಾರು ಪರಿಸರದಲ್ಲಿ ಆಗೊಮ್ಮೆ ಈಗೊಮ್ಮೆ ಚಿರತೆಗಳ ಕಾಣಸಿಗುವುದು ಸಾಮಾನ್ಯವಾಗಿದೆ. ಜಾನುವಾರು, ನಾಯಿಗಳ ಬೇಟೆಗಾಗಿ ಚಿರತೆಗಳು ಕಾಡಿನಿಂದ ನಾಡಿನತ್ತ ಬರುತ್ತಿದೆ. ಇದರಿಂದ ಜನತೆ ಹೊರಬರಲು ಭಯಪಡುತ್ತಿದ್ದಾರೆ.

ಆಹಾರ ಹುಡುಕಿಕೊಂಡು ನಾಯಿಗಳ, ಜಾನುವಾರುಗಳ ಭೇಟೆಗಾಗಿ ಪದೇ ಪದೆ ಚಿರತೆಗಳು ಕಾಡಿನಿಂದ ನಾಡಿನತ್ತ ಬರುತ್ತಿದೆ. ಆದ್ದರಿಂದ ಜನರು ತಮ್ಮ ಮಕ್ಕಳು ಮತ್ತು ಜಾನುವಾರುಗಳ ರಕ್ಷಣೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಲ್ಲದೆ, ಸಂಬಂಧಪಟ್ಟ ಇಲಾಖೆಯವರು ಅಗತ್ಯ ಕ್ರಮವಹಿಸಬೇಕಿದೆ.
– ಪ್ರಕಾಶ್‌ ರಾವ್‌
ಪುರಸಭಾ ಮಾಜಿ ಸದಸ್ಯ













































































































































































error: Content is protected !!
Scroll to Top