ಸೆ. 9 : ರಾಷ್ಟ್ರೀಯ ಈಡಿಗ ಮಹಾಮಂಡಳಿಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಮಾನ ಮನಸ್ಕರ ವಿಶೇಷ ಸಭೆ

ಕಾರ್ಕಳ : ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ನೇತೃತ್ವದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವಿಶೇಷ ಸಭೆ ಸೆ. 9 ರಂದು ಬೆಳಿಗ್ಗೆ 10 ಗಂಟೆಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.

ರಾಜ್ಯದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ದೀವರು ಸೇರಿದಂತೆ 26 ಪಂಗಡಗಳನ್ನು ಹೊಂದಿದ ಜನ ಸಮುದಾಯವು ಸುಮಾರು 70 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಕರ್ನಾಟಕದ ನಾಲ್ಕನೇ ಅತಿ ದೊಡ್ಡ ಸಮುದಾಯವಾಗಿದೆ. ಸಮುದಾಯದ ಅಭಿವೃದ್ಧಿಗಾಗಿ ಮಂಡಳಿ‌ ಮೂಲಕ ಸುಮಾರು 2 ವರ್ಷದಿಂದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪೀಠಾಧಿಪತಿ ಡಾ. ಶ್ರೀ ಪ್ರಣವಾನಂದ ಮಹಾಸ್ವಾಮೀಜಿಯವರ‌ ನೇತೃತ್ವದಲ್ಲಿ ಜಾಗೃತಿ ಹಮ್ಮಿಕೊಳ್ಳಲಾಗುತ್ತಿದೆ.

ಈ‌ ಹಿಂದೆ ಆರ್ಯ ಈಡಿಗ ಸಮಾಜಕ್ಕೆ ನಿಗಮ ಮಂಡಳಿ ಘೋಷಣೆಯಾಗಿತ್ತು ಆದರೆ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಅಲ್ಲದೆ ಸಮುದಾಯದಲ್ಲಿನ ರಾಜಕೀಯ ನಾಯಕರ ಧ್ವನಿಯನ್ನು ಕುಗ್ಗಿಸುವ ಹಾಗೂ ಅವರನ್ನು ರಾಜಕೀಯ ಅಧಿಕಾರ ಸ್ಥಾನಮಾನಗಳಿಂದ ದೂರ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹಿಂದುಳಿದ ಸಮುದಾಯದ ಉಳಿವಿಗಾಗಿ ಮತ್ತು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಶಕ್ತಿಯ ಸಂವರ್ಧನೆಗಾಗಿ ರಾಜ್ಯಮಟ್ಟದಲ್ಲಿ ನಡೆಯಲಿರುವ ಸ್ವಾಭಿಮಾನ ಸಮಾವೇಶದ ಪೂರ್ವಭಾವಿ ಸಬೆಯು ಬೆಂಗಳೂರಿನಲ್ಲಿ ನಡೆಯಲಿದ್ದು, ವಿವಿಧ ತಾಲೂಕುಗಳಿಂದ ಹಿಂದುಳಿದ ಸಮುದಾಯದ ಜನತೆ ಪಾಲ್ಗೊಳ್ಳುತ್ತಿದ್ದಾರೆ. ಕಾರ್ಕಳದಿಂದಲೂ ಈಡಿಗ ಸಮುದಾಯದವರು ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿಯ ಕಾರ್ಕಳ ಘಟಕದ ಅಧ್ಯಕ್ಷ ಸುಶಾಂತ್‌ ಸುಧಾಕರ್‌ ತಿಳಿಸಿದ್ದಾರೆ.

error: Content is protected !!
Scroll to Top