ಬಾಗುವುದು ನಮ್ಮತನವಾಗಬೇಕೆ ಹೊರತು ಬೀಗುವುದಲ್ಲ : ಅಮೃತ್ ರೈ
ಉಡುಪಿ : ಶಿಕ್ಷಣ ಇಲಾಖೆ, ಶಿಕ್ಷಣ ಸಂಸ್ಥೆಯಿಂದ ಪೋಷಕರವರೆಗೆ ಎಲ್ಲರೂ ಶಿಕ್ಷಕರ ಮೇಲೆ ಅನೇಕ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಈ ನಿರೀಕ್ಷೆಗಳನ್ನು ಸಾಕರಗೊಳಿಸುವುದೇ ಓರ್ವ ಶಿಕ್ಷಕನ ಸವಾಲಾಗಿರುತ್ತದೆ. ಶಿಕ್ಷಕ ತನ್ನ ಶಿಷ್ಯನನ್ನು ಪರಿಪೂರ್ಣಗೊಳಿಸುವ ಸಲುವಾಗಿ ವಿದ್ಯಾರ್ಥಿಯ ಮನದಲ್ಲಿ ಧನಾತ್ಮಕ ಚಿಂತನೆಯನ್ನು ಬಿತ್ತಿ ಮೌಲ್ಯಾಧಾರಿತ ವ್ಯಕ್ತಿತ್ವವನ್ನು ರೂಪುಗೊಳಿಸುವ ಮೂಲಕ ತನ್ನ ಗುರಿ ತಲುಪುತ್ತಾನೆ ಎಂದು ಡಾ. ಟಿ. ಎಂ. ಎ. ಪೈ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಶೇಖರ ಪಿ. ಅಭಿಪ್ರಾಯಪಟ್ಟರು. ಅವರು ಉಡುಪಿ ತ್ರಿಶಾ ಕಾಲೇಜಿನಲ್ಲಿ ಸೆ. 7 ರಂದು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆದ ಗುರುದೇವೋಭವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ರಿಯೇಟಿವ್ ವಿದ್ಯಾಸಂಸ್ಥೆಯ ಸಹಸಂಸ್ಥಾಪಕ ಡಾ. ಗಣನಾಥ ಶೆಟ್ಟಿ, ವಿಭಿನ್ನ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಹುರುಪು ಹುರಿದುಂಬಿಸುವ ಕೆಲಸ ಸಂಸ್ಥೆ ಮಾಡಿಕೊಂಡು ಬರುತ್ತಿದೆ. ಅಂತಹ ಕಾರ್ಯಕ್ರಮಗಳಲ್ಲಿ ವಿಶೇಷವಾದುದು ಗುರುದೇವೋಭವ. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಗುರುವಿನ ಮಹತ್ವತೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಸನ್ಮಾನ
ಕಾರ್ಯಕ್ರಮದಲ್ಲಿ ಉಡುಪಿ ಕಲ್ಯಾಣಪುರದ ಡಾ. ಟಿ. ಎಂ. ಎ. ಪೈ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶೇಖರ ಪಿ., ಬ್ರಹ್ಮಾವರ ಜಿ. ಎಮ್. ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಜಾರ್ಜ್ ಕುರಿಯನ್, ಹಟ್ಟಿಯಂಗಡಿ ಶಿಕ್ಷಣ ಪ್ರತಿಷ್ಠಾನದ ಪ್ರಾಂಶುಪಾಲ ಶರಣ್ ಕುಮಾರ್ ಹಾಗೂ ತ್ರಿಶಾ ಪದವಿ ಪೂರ್ವ ಕಾಲೇಜಿನ ಹಿಂದಿ ಮತ್ತು ಸಂಸ್ಕ್ರತ ಉಪನ್ಯಾಸಕ ವಿದ್ವಾನ್ ಸುಧಾಕರ ಐ.ಡಿ, ಅವರನ್ನು ಸನ್ಮಾನಿಸಲಾಯಿತು. ಬಳಿಕ ಕಾಲೇಜಿನ ಗುರುವೃಂದದವರಿಗೆ ಗೌರವವನ್ನು ಸಲ್ಲಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಅಮೃತ್ ರೈ ಮಾತನಾಡಿ, ವಿದ್ಯಾರ್ಥಿಗಳು ಜೀವನ ಪರ್ಯಂತ ತನ್ನ ಜೀವನೋಪಾಯಕ್ಕೆ ಮಾರ್ಗದರ್ಶನವನ್ನು ನೀಡಿರುವ, ಸಮಾಜದಲ್ಲಿ ತನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿದ ಗುರುವನ್ನು ಎಂದಿಗೂ ಮರೆಯಬಾರದು. ಬಾಗುವುದು ನಮ್ಮತನವಾಗಬೇಕೇ ಹೊರತು, ಬೀಗುವುದರಿಂದ ನಮಗೇನು ಸಿಗಲಾರದು. ಆದುದರಿಂದ ಗುರುಗಳು ಆಜ್ಞಾಪಿಸಿದ್ದನ್ನು ಶ್ರದ್ಧೆ-ಭಕ್ತಿಯಿಂದ ಪಾಲಿಸಿದ್ದೇ ಆದರೆ ಉತ್ತಮವಾದ ಗುರಿಯನ್ನು ತಲುಪಲು ಸಾಧ್ಯ ಎಂದವರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಸಂಸ್ಥೆಯ ಪ್ರಾಂಶುಪಾಲ ಸ್ಟ್ಯಾನ್ಲಿ ಲೋಬೋ ಸ್ವಾಗತಿಸಿ, ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು. ವಿದ್ಯಾರ್ಥಿಗಳಾದ ಸೃಷ್ಟಿ ನಿರೂಪಿಸಿ, ಯುವರಾಜ್ ಬಿ.ಕೆ ವಂದಿಸಿದರು.

ಮೊಸರು ಕುಡಿಕೆ-ಹುಲಿವೇಷ
ಸಭಾ ಕಾರ್ಯಕ್ರಮದ ನಂತರ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕಾಲೇಜಿನ ಆವರಣದಲ್ಲಿ ಮೊಸರು ಕುಡಿಕೆ ಕಾರ್ಯಕ್ರಮ ನಡೆಯಿತು. ಬಳಿಕ ಉಳಿದವರು ಕಂಡಂತೆ ಚಲನಚಿತ್ರದಲ್ಲಿ ಭಾಗವಹಿಸಿ ಪ್ರಸಿದ್ಧಿಯನ್ನು ಪಡೆದ ಕೊರಂಗ್ರಪಾಡಿ ಹುಲಿವೇಷ ತಂಡದಿಂದ ನಡೆದ ಹುಲಿ ಕುಣಿತ ಎಲ್ಲರ ಗಮನ ಸೆಳೆಯಿತು.
