ಕಾರ್ಕಳ : ಬೈಲೂರು ಎರ್ಲಪಾಡಿಯಲ್ಲಿ ಸ್ಥಾಪಿತವಾಗಿರುವ ಪರಶುರಾಮ ಥೀಮ್ ಪಾರ್ಕ್‌ನ ಬಗ್ಗೆ ಅಪಪ್ರಚಾರ ಮಾಡುತ್ತಾ ಪ್ರತಿಭಟನೆ ನಡೆಸುತ್ತಿರುವುದು ಮತ್ತು ಯೋಜನೆಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದು ಯರ್ಲಪಾಡಿ ಮತ್ತು ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷರು – ಉಪಾಧ್ಯಕ್ಷರು ವಿಷಾದ ವ್ಯಕ್ತಪಡಿಸಿದ್ದಾರೆ.
ಕಾರ್ಕಳ ಕ್ಷೇತ್ರದ ಶಾಸಕ, ಮಾಜಿ ಸಚಿವ ಸುನಿಲ್ ಕುಮಾರ್ ಅವರು ಕಾರ್ಕಳ ಕ್ಷೇತ್ರವನ್ನು ಪ್ರವಾಸೋದ್ಯಮ ಕ್ಷೇತ್ರವಾಗಿಸಬೇಕೆಂಬ ನಿಟ್ಟಿನಲ್ಲಿ ಸರಕಾರದ ಅನುದಾನದ ಮೂಲಕ ತುಳುನಾಡಿನ ಸೃಷ್ಟಿಕರ್ತ ಪರಶುರಾಮನ ಮೂರ್ತಿಯನ್ನು ಬೈಲೂರು ಎರ್ಲಪಾಡಿಯಲ್ಲಿರುವ ಉಮಿಕಲ್ ಬೆಟ್ಟದ ಮೇಲೆ ಸ್ಥಾಪಿಸುವ ಯೋಜನೆಯನ್ನು ಕೈಗೊಂಡಿದ್ದರು. ಈ ಯೋಜನೆಯಿಂದಾಗಿ ಇಂದು ನಮ್ಮ ಊರು ಬಹಳ ಪ್ರಸಿದ್ಧಿಗೆ ಬರುವಂತಾಯಿತು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಥೀಮ್ ಪಾರ್ಕ್‌ನ ಒಂದು ಹಂತದ ಕಾಮಗಾರಿ ನಡೆದು ಉದ್ಘಾಟನೆಗೊಂಡಿರುತ್ತದೆ. ಆದರೆ, ಈ ಯೋಜನೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ ಇದುವರೆಗೆ ಥೀಮ್ ಪಾರ್ಕ್ ಅನ್ನು ಸಂಬಂಧಪಟ್ಟ ಇಲಾಖೆಗಾಗಲಿ, ಸ್ಥಳೀಯಾಡಳಿತಕ್ಕಾಗಲಿ ಹಸ್ತಾಂತರ ಮಾಡಲಾಗಿಲ್ಲ. ಅದರ ನಡುವೆಯೇ ಕೆಲವು ವ್ಯಕ್ತಿಗಳು ಸೇರಿ ದುರುದ್ದೇಶದಿಂದ ಈ ಯೋಜನೆಯ ಬಗ್ಗೆ ಕಾಮಗಾರಿಯಲ್ಲಿ ಲೋಪದೋಷಗಳನ್ನು ಹೇಳುತ್ತಾ ಅದರ ಬಗ್ಗೆ ಪ್ರತಿಭಟನೆಗಳನ್ನು ಮಾಡುತ್ತಿರುವುದು ಬಹಳ ಬೇಸರದ ಸಂಗತಿ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನೋವಿನ ಸಂಗತಿ
ಈ ಯೋಜನೆಯು ರಾಜ್ಯವ್ಯಾಪಿ, ರಾಷ್ಟ್ರವ್ಯಾಪಿಯಾಗಿ ಗುರುತಿಸಿಕೊಂಡು ಎರ್ಲಪಾಡಿ ಬೈಲೂರಿಗೆ ಕೀರ್ತಿ ತಂದಿದೆ. ನಮ್ಮೂರಿನ ಹೆಸರನ್ನು ಇವತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಿದೆ. ಆದರೆ ಪ್ರತಿಭಟನಾಕಾರರ ಈ ವರ್ತನೆ ನಮ್ಮ ಊರಿನ ಜನರಿಗೆ ನೋವನ್ನುಂಟು ಮಾಡುತ್ತಿದೆ.
ಸ್ಪಷ್ಟನೆ
ಕಾಮಗಾರಿ ಉಸ್ತುವಾರಿ ವಹಿಸಿರುವ ನಿರ್ಮಿತಿ ಕೇಂದ್ರದವರು ಇಲ್ಲಿನ ಕೆಲಸ ಕಾರ್ಯಗಳು ಇನ್ನೂ ಪೂರ್ಣಗೊಂಡಿಲ್ಲ. ಅಲ್ಲದೆ ನಿರ್ಮಾಣದಲ್ಲಿ ಯಾವುದೇ ಲೋಪದೋಷಗಳು ಆಗಿಲ್ಲ. ಶೀಘ್ರದಲ್ಲಿ ಅದನ್ನು ಪೂರ್ಣಗೊಳಿಸಿ ಸಂಬಂಧಪಟ್ಟ ಇಲಾಖೆಗೆ ಬಿಟ್ಟು ಕೊಡುತ್ತೇವೆ ಎಂಬುದಾಗಿ ತಿಳಿಸಿರುತ್ತಾರೆ. ಇಷ್ಟಾಗಿಯೂ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಗಳನ್ನು ಮುಂದುವರೆಸಿ ಯೋಜನೆಗೆ ಅಡ್ಡಿಪಡಿಸುತ್ತಿರುವುದು ಖಂಡನೀಯ. ಸಂಬಂಧಪಟ್ಟ ತಾಲೂಕು ಆಡಳಿತ, ಜಿಲ್ಲಾಡಳಿತ ಮತ್ತು ಸರಕಾರ ಈ ಯೋಜನೆಯನ್ನು ಪೂರ್ಣಗೊಳಿಸಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕು ಎಂದು ಎರ್ಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುನಿಲ್ ಹೆಗ್ಡೆ, ಉಪಾಧ್ಯಕ್ಷೆ ರೇಖಾ ಆಚಾರ್ಯ ಹಾಗೂ ಬೈಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ, ಉಪಾಧ್ಯಕ್ಷ ಸಂತೋಷ್ ಸಾಲಿಯಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.