ತಂದೆ-ತಾಯಿ, ಗುರುಗಳೇ ತ್ರಿಮೂರ್ತಿಗಳು : ಕುದಿ ವಸಂತ ಶೆಟ್ಟಿ
ಕಾರ್ಕಳ : ಲೌಕಿಕ ಜೀವನದಲ್ಲಿ ತಂದೆ, ತಾಯಿ, ಗುರುಗಳೇ ತ್ರಿಮೂರ್ತಿಗಳು. ದೇವರ ಸ್ಥಾನದಲ್ಲಿರುವ ಅವರನ್ನು ಸದಾ ಗೌರವಿಸಬೇಕು. ಅವರ ಆಶೀರ್ವಾದ ನಮ್ಮಲ್ಲಿ ಸಕಾರಾತ್ಮಕ ಗುಣಗಳು ಬೆಳೆಯುವಂತೆ ಮಾಡುತ್ತದೆ ಎಂದು ಕುದಿ ವಿಷ್ಣುಮೂರ್ತಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ, ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕುದಿ ವಸಂತ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಅವರು ಸೆ. 5 ರಂದು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಸನ್ಮಾನ
ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಹಾಗೂ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಒಳಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಪದ್ಮಾವತಿ, ಕಡಿಯಾಳಿ ಕಮಲಾಬಾಯಿ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಎನ್. ಎಂ. ಪೂಜಾರಿ ಹಾಗೂ ಬೋರ್ಡ್ ಹೈಸ್ಕೂಲ್ ನಿವೃತ್ತ ಮುಖ್ಯ ಶಿಕ್ಷಕಿ ಭಾರತಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಕುದಿ ವಸಂತ ಶೆಟ್ಟಿಯವರನ್ನು ಗೌರವಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಶಿಕ್ಷಕ ಸಮುದಾಯವನ್ನು ಮನದಲ್ಲಿರಿಸಿ ಸಾಂಕೇತಿಕವಾಗಿ ಮೂವರು ಶಿಕ್ಷಕರನ್ನು ಗುರುತಿಸುತ್ತಿದ್ದೇವೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮುಖೇನ ಗುರುಗಳಿಗೆ ಕೊಡಮಾಡುವ ಗೌರವವನ್ನು ಅರಿಯಬೇಕು. ಪ್ರತಿಯೊಬ್ಬರ ಕನಸಿಗೆ ರೆಕ್ಕೆ ಕಟ್ಟಿದ ಗುರುಗಳನ್ನು ಮರೆಯದಿರಿ ಎಂದರು.
ಈ ಸಂದರ್ಭ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ. ಕೊಡವೂರು, ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ ಉಪಸ್ಥಿತರಿದ್ದರು. ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಸಂತೋಷ್ ಸ್ವಾಗತಿಸಿ, ಕನ್ನಡ ಭಾಷಾ ಉಪನ್ಯಾಸಕಿ ಪವಿತ್ರ ಕಾರ್ಯಕ್ರಮ ನಿರ್ವಹಿಸಿದರು.