ಪರಶುರಾಮ ಥೀಮ್‌ ಪಾರ್ಕ್‌ ಕಾಮಗಾರಿ ಗುಣಮಟ್ಟದಿಂದ ಕೂಡಿದೆ : ನಿರ್ಮಿತಿ ಕೇಂದ್ರ ಸ್ಪಷ್ಟನೆ

ಮಾಹಿತಿ ಗೊತ್ತಿಲ್ಲದವರು ಮಾಡುವ ಅಪಪ್ರಚಾರದಿಂದ ಗೊಂದಲ

ಉಡುಪಿ : ಕಾರ್ಕಳದ ಬೈಲೂರಿನಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್‌ ಪಾರ್ಕ್‌ಗೆ ಸಂಬಂಧಿಸಿದಂತೆ ಕೆಲವರು ಮಾಡುತ್ತಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಕೆಲವರು ವಾಸ್ತವಾಂಶ ತಿಳಿಯದೆ ಪರಶುರಾಮ ಥೀಮ್‌ ಪಾರ್ಕ್ ಬಗ್ಗೆ ಅಪಪ್ರಚಾರ ಮಾಡುತ್ತಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಪರಶುರಾಮ ಥೀಮ್‌ ಪಾರ್ಕ್‌ ನಿಯಮ ಪ್ರಕಾರವೇ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಕಾಮಗಾರಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಕಾಮಗಾರಿ ಪೂರ್ಣಗೊಂಡು ಗುಣಮಟ್ಟ ಹಾಗೂ ಶ್ರೇಷ್ಠತೆಯೊಂದಿಗೆ ಶೀಘ್ರವೇ ಸಾರ್ವಜನಿಕರಿಗೆ ಮುಕ್ತವಾಗಿ ಮುಂದಿನ ದಿನಗಳಲ್ಲಿ ಪ್ರೇಕ್ಷಣೀಯ ಸ್ಥಳವಾಗಿ ಕಾಣಿಸಿಕೊಳ್ಳಲಿದೆ ಎಂದವರು ಸ್ಪಷ್ಟಪಡಿಸಿದ್ದಾರೆ. ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಮೂಲಕ ಪರಶುರಾಮ ಥೀಮ್‌ ಪಾರ್ಕ್ ನಿರ್ಮಾಣಗೊಂಡಿದೆ. ಬಾಕಿ ಉಳಿದಿರುವ ಕೆಲ ಕಾಮಗಾರಿಯನ್ನು ಪೂರ್ಣಗೊಳಿಸಿ ಶೀಘ್ರವೇ ಮತ್ತೆ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಉಡುಪಿಯ ನಿರ್ಮಿತಿ ಕೇಂದ್ರ ಜಿಲ್ಲಾಡಳಿತದ ಒಂದು ಅಂಗಸಂಸ್ಥೆಯಾಗಿದ್ದು, ಜಿಲ್ಲಾಧಿಕಾರಿಗಳು ಇದರ ಅಧ್ಯಕ್ಷರಾಗಿರುತ್ತಾರೆ. ಸರಕಾರದ ಅನುದಾನದ ಕೆಲವೊಂದು ಸಿವಿಲ್ ಕಾಮಗಾರಿಗಳನ್ನು ಉಡುಪಿ ಜಿಲ್ಲಾ ನಿರ್ಮಿತಿ ಕೇಂದ್ರದ ಮೂಲಕ ಮಾಡಲಾಗುತ್ತಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

2021-22ನೇ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದೊಂದಿಗೆ ಬೈಲೂರಿನ ಉಮಿಕಲ್‌ಬೆಟ್ಟದಲ್ಲಿ ಪರಶುರಾಮ ಥೀಮ್‌ ಪಾರ್ಕ್ ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. ಕಾಮಗಾರಿಗಳು ಪೂರ್ಣಗೊಳ್ಳುವ ಮೊದಲೇ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಪರಶುರಾಮ ಥೀಮ್‌ ಪಾರ್ಕ್‌ ಉದ್ಘಾಟನೆಗೊಂಡಿದೆ. ಈ ಕಾಮಗಾರಿಗೆ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆಯಾಗಿದ್ದು, ಉದ್ಘಾಟನೆ ಸಲುವಾಗಿ ಕೆಲವು ಕಾಮಗಾರಿಗಳನ್ನು ಬಾಕಿ ಉಳಿಸಿಕೊಂಡು ಉದ್ಘಾಟನೆ ನಡೆಸಲಾಗಿತ್ತು. ಇದೀಗ ಪರಶುರಾಮ ಮೂರ್ತಿ ಹಾಗೂ ಇನ್ನಿತರ ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕಾಮಗಾರಿ ನಡೆಯುತ್ತಿದೆ ಎಂದಿದ್ದಾರೆ.

error: Content is protected !!
Scroll to Top