ಹಿಂದೂ ಧರ್ಮ ಅವಹೇಳನದ ಹಿಂದೆ ರಹಸ್ಯ ಕಾರ್ಯಸೂಚಿ : ಮಹಾವೀರ ಹೆಗ್ಡೆ

ಹಿಂದೂಗಳನ್ನು ಛಿದ್ರಗೊಳಿಸುವ ಕೆಲಸಕ್ಕೆ ಕಾಂಗ್ರೆಸ್‌ ಬೆಂಬಲ ಎಂದು ಆರೋಪ

ಕಾರ್ಕಳ : ಕಾರ್ಕಳದ ಬೈಲೂರಿನಲ್ಲಿ ನಿರ್ಮಾಣವಾಗಿರುವ ಪರಶುರಾಮ ಥೀಮ್‌ ಪಾರ್ಕ್‌ ಕುರಿತು ನಿರಂತರ ಅಪಪ್ರಚಾರ, ಸೌಜನ್ಯಾ ಪ್ರಕರಣವನ್ನು ನೆಪ ಮಾಡಿಕೊಂಡು ಧರ್ಮಸ್ಥಳ ಮತ್ತು ಧರ್ಮಾಧಿಕಾರಿಯ ವಿರುದ್ಧ ನಡೆಯುತ್ತಿರುವ ನಿರಂತರ ದಾಳಿ, ಸನಾತನ ಧರ್ಮ ಡೆಂಗ್ಯೂ, ಮಲೇರಿಯಾದಂಥ ಮಾರಕ ಕಾಯಿಲೆ ಅದನ್ನು ನಿರ್ಮೂಲನೆ ಮಾಡಬೇಕೆಂದು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್‌ ನೀಡಿರುವ ಹೇಳಿಕೆ ಇವೆಲ್ಲ ಮೇಲ್ನೋಟಕ್ಕೆ ಪ್ರತ್ಯೇಕ ಘಟನೆಗಳಂತೆ ಕಂಡರೂ ಇವುಗಳನ್ನೆಲ್ಲ ಸಮಗ್ರವಾಗಿ ಗ್ರಹಿಸಿದಾಗ ಇದರ ಹಿಂದೆ ನಿಗೂಢ ಕಾರ್ಯಸೂಚಿ ಇರುವುದು ಗೋಚರವಾಗುತ್ತದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್‌ ಹೆಗ್ಡೆ ಹೇಳಿದ್ದಾರೆ.

ಹಿಂದು ಧರ್ಮವನ್ನು ಹೀಯಾಳಿಸುವ ಮೂಲಕ ಹಿಂದುಗಳಲ್ಲಿ ತಮ್ಮ ಧರ್ಮದ ಬಗ್ಗೆ ಕೀಳರಿಮೆ ಮೂಡುವಂತೆ ಮಾಡಿ ಅವರ ನೈತಿಕ ಸ್ಥೈರ್ಯವನ್ನು ಅಸ್ಥಿರಗೊಳಿಸುವುದು, ಆ ಮೂಲಕ ಅವರನ್ನು ಒಡೆದು ಛಿದ್ರಗೊಳಿಸುವುದು ಈ ರಹಸ್ಯ ಕಾರ್ಯಸೂಚಿ. ಇವೆಲ್ಲವುಗಳ ಹಿಂದೆ ಕಾಂಗ್ರೆಸ್‌ ಇರುವುದು ನಿಚ್ಚಳ. ಉದಯನಿಧಿ ಸ್ಟಾಲಿನ್‌ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕರು ಸಮರ್ಥಿಸಿಕೊಂಡಿರುವ ರೀತಿಯೇ ಕಾಂಗ್ರೆಸ್‌ನಲ್ಲಿ ಎಷ್ಟು ಹಿಂದು ದ್ವೇ಼ಷ ತುಂಬಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ರಾಜ್ಯದ ಗೃಹ ಸಚಿವರಾಗಿರುವ ಪರಮೇಶ್ವರ ಅವರೇ ಹಿಂದು ಧರ್ಮ ಹುಟ್ಟಿದ್ದು ಯಾವಾಗ, ಅದರ ಜನಕ ಯಾರು ಎಂದೆಲ್ಲ ಅಸಂಬದ್ಧವಾಗಿ ಮಾತನಾಡಿದ್ದಾರೆ ಎಂದರೆ ಉಳಿದವರ ಬಗ್ಗೆ ಹೇಳುವ ಅಗತ್ಯವಿಲ್ಲ. ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಹಿಂದೂಗಳಾಗುವ ಕಾಂಗ್ರೆಸ್ ನಾಯಕರು, ದಶಕಗಳ ಕಾಲದಿಂದ ಹಿಂದೂಗಳನ್ನು ಹಾಗೂ ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಲೇ ಬಂದಿದ್ದಾರೆ. ಹಿಂದೂ ಧರ್ಮವನ್ನು ಅವಹೇಳನ ಮಾಡುವ, ತುಳಿಯುವ ವ್ಯಕ್ತಿಗಳಿಗೆ ಹಾಗೂ ಸಂಘಟನೆಗಳಿಗೆ ಕಾಂಗ್ರೆಸ್ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿರುವುದಕ್ಕೆ ಸಾವಿರಾರು ಉದಾಹರಣೆಗಳಿವೆ. ಚುನಾವಣೆಗಾಗುವಾಗ ಹಿಂದುಗಳನ್ನು ಓಲೈಸಲು ಬಿಟ್ಟಿ ಭಾಗ್ಯಗಳನ್ನು ಘೋಷಿಸುವ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಹಿಂದುಗಳನ್ನು ಯಾವ ರೀತಿ ದಮನಿಸುತ್ತದೆ ಎನ್ನುವುದಕ್ಕೆ ಕರ್ನಾಟಕದ ಪ್ರಸ್ತುತ ಆಡಳಿತ ವ್ಯವಸ್ಥೆಯೇ ಸಾಕ್ಷಿ ಎಂದಿದ್ದಾರೆ.

ಕಾಂಗ್ರೆಸ್ ಹಿಂದೂಗಳನ್ನು ಕೀಳಾಗಿಸುವುದಕ್ಕೆ ಸ್ವಾತಂತ್ರ್ಯ ಲಭಿಸಿದಾಗಿನಿಂದಲೂ ಷಡ್ಯಂತ್ರವನ್ನು ಮಾಡುತ್ತಲೇ ಬಂದಿದೆ. ಮಾನಸಿಕವಾಗಿ ಹಿಂದುಗಳಲ್ಲಿ ವಿಭಜನೆಯನ್ನು ಸೃಷ್ಟಿಸುವ ಕೆಲಸವನ್ನು ಮಾಡುತ್ತಲೇ ಇದೆ. ಮತಬ್ಯಾಂಕ್‌ಗಾಗಿ ಧರ್ಮ, ಸಮಾಜವನ್ನು ಒಡೆಯುವುದು ಕಾಂಗ್ರೆಸ್‌ ಅನುಸರಿಸುತ್ತಿರುವ ಪರಂಪರಾಗತ ಕಾರ್ಯತಂತ್ರ. ಕರ್ನಾಟಕದಲ್ಲಿ ವೀರಶೈವ ಲಿಂಗಾಯತರನ್ನು ಪ್ರತ್ಯೇಕ ಧರ್ಮ ಎಂದು ಮಾಡಲು ದೊಡ್ಡ ಮಟ್ಟದಲ್ಲಿ ಪ್ರಯತ್ನಿಸಿದ್ದೇ ಕಾಂಗ್ರೆಸ್‌. ಅದು ಸಾಧ್ಯಾವಾಗದೇ ಹೋದಾಗ ವೀರಶೈವ ಲಿಂಗಾಯತರನ್ನೇ ವಿಭಜಿಸಿ ಚುನಾವಣೆಯಲ್ಲಿ ಲಾಭ ಗಳಿಸಿದ್ದನ್ನು ನಾವು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಂಡಿದ್ದೇವೆ. ಕಾಂಗ್ರೆಸ್‌ ಹಿಂದೂ ವಿರೋಧಿ ಪಕ್ಷ ಎಂದು ಸಾಬೀತುಪಡಿಸಲು ಇನ್ನೇನು ಬೇಕು.

ಕಳೆದ ಆರೇಳು ವರ್ಷಗಳಲ್ಲಿ ಅದು ಎಡಪಂಥೀಯರೊಂದಿಗೆ ಸೇರಿ ಹಿಂದೂ ಹಬ್ಬಗಳು ಮತ್ತು ಹಿಂದೂ ಸಂಸ್ಕೃತಿಯ ಮೇಲೆ ಪದೇಪದೆ ದಾಳಿ ಮಾಡುವ ಕಾರ್ಯಕ್ಕೆ ಇಳಿದಿದೆ. ಹಿಂದೂಗಳನ್ನು ಕಂಡರೆ ಸದಾ ದ್ವೇಷ ಕಾರುವ ಪಕ್ಷಗಳ ಜತೆ ಸ್ನೇಹ ಬೆಳೆಸಿರುವ ಕಾಂಗ್ರೆಸ್, ಈಗ ಹಿಂದೂ ಧರ್ಮದ ಮೇಲೆ ತನಗಿರುವ ದ್ವೇಷವನ್ನು ತನ್ನ ಮಿತ್ರ ಪಕ್ಷಗಳಿಂದ ವ್ಯಕ್ತಪಡಿಸುತ್ತಿದೆ. ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಹಿಂದೂ ವಿರೋಧಿ ಮನಸ್ಥಿತಿ, ಹಿಂದೂ ಧರ್ಮ ಹಾಗೂ ದೇವರುಗಳ ಅವಹೇಳನ ಹೀಗೆ ಕಾಂಗ್ರೆಸ್‌ನ ಡಿಎನ್‌ಎಯಲ್ಲಿ ಅಡಕವಾಗಿರುವ ಗುಣಗಳನ್ನೇ ಹೊಂದಿರುವ ಕೆಲವು ಪಕ್ಷಗಳ ನಾಯಕರು, ಹಿಂದೂ ಧರ್ಮದ ವಿರುದ್ಧ ದ್ವೇಷ ಕಾರುವುದನ್ನೇ ತಮ್ಮ ದಿನನಿತ್ಯದ ಕಾಯಕವನ್ನಾಗಿಸಿಕೊಂಡಿದ್ದಾರೆ. ಸಾಲದ್ದಕ್ಕೆ ಹಿಂದೂಗಳ ಮೇಲೆ ದ್ವೇಷ ಕಾರುವ ಈ ಒಕ್ಕೂಟಕ್ಕೆ I.N.D.I.A ಎಂಬ ಹೆಸರಿಟ್ಟುಕೊಂಡಿದ್ದಾರೆ ಎಂದು ಮಹಾವೀರ ಹೆಗ್ಡೆ ಹೇಳಿದ್ದಾರೆ.

error: Content is protected !!
Scroll to Top