ಕಾರ್ಕಳ : ಕ್ರೈಸ್ಟ್‌ಕಿಂಗ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಆಶ್ರಯದಲ್ಲಿ ಫಾ.ಎಫ್.ಪಿ.ಎಸ್ ಮೋನಿಸ್ ಸಭಾಂಗಣದಲ್ಲಿ ಸೆ. 6 ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಜರುಗಿತು. ಶ್ರೀ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಚಾರ್ಯ ವೈ. ಪಾಂಡುರಂಗ ನಾಯಕ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಒಬ್ಬರ ವ್ಯಕ್ತಿಯ ಜೀವನದಲ್ಲಿ ತಂದೆ-ತಾಯಿ, ವಿದ್ಯೆ ಕಲಿಸಿದ ಗುರು ಮತ್ತು ಆಧ್ಯಾತ್ಮಿಕ ಗುರುವಿನ ಪಾತ್ರ ಮಹತ್ವವಾದುದು. ಈ ಮೂವರ ಮೇಲಿನ ಗೌರವ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದರು.
ಪ್ರಶಸ್ತಿ ಪ್ರದಾನ
ಬೆಳ್ಮಣ್ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಲಿಡ್ವಿನ್ ಅರಾನ್ಹ ಅವರಿಗೆ ʼಕ್ರೈಸ್ಟ್‌ಕಿಂಗ್ ಶಿಕ್ಷಕ ರತ್ನʼ ಪ್ರಶಸ್ತಿ ಹಾಗೂ ರೆಂಜಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಣ್ಣಿ ಎಂ. ಅವರಿಗೆ ‘ಕ್ರೈಸ್ಟ್‌ಕಿಂಗ್ ಕ್ರೀಡಾ ಶಿಕ್ಷಕಶ್ರೀʼ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭ ಸಂಸ್ಥೆಯ ಹಿಂದಿ ಉಪನ್ಯಾಸಕಿ ಸುನೀತ ಸಾಲಿಯಾನ್ ಹಾಗೂ ಪ್ರಾಥಮಿಕ ಶಾಲಾ ಸಹಶಿಕ್ಷಕಿ ಶಾಜಿದಾ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಎಲ್ಲಾ ಶಿಕ್ಷಕರು, ಉಪನ್ಯಾಸಕರು ಹಾಗೂ ಬೋಧಕೇತರ ವೃಂದದವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಅಣ್ಣಿ ಎಂ., ವಿದ್ಯಾರ್ಥಿಗಳ ಬಾಯಿಯಿಂದ ಗುರುಗಳ ಬಗ್ಗೆ ಸಾರ್ಥಕ್ಯದ ಮಾತುಗಳನ್ನು ಕೇಳಿದರೆ ಅದಕ್ಕಿಂತ ಮಿಗಿಲಾದ ಪ್ರಶಸ್ತಿ ಇನ್ನೊಂದಿಲ್ಲ. ವಿದ್ಯಾರ್ಥಿಗಳ ಕ್ರೀಡಾ ಸಾಧನೆಯಲ್ಲಿ ಶಿಕ್ಷಕರೊಂದಿಗೆ ಪೋಷಕರ ಬೆಂಬಲವೂ ಅಗತ್ಯ. ಸೋತು ಗೆದ್ದವನು ಮತ್ತೆ ಯಾವತ್ತೂ ಸೋಲಲು ಸಾಧ್ಯವಿಲ್ಲ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಮಾತನಾಡಿ, ಒಂದು ದೇಶ ಸೂಪರ್ ಪವರ್ ಆಗುವುದಿದ್ದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದು ಶಕ್ತಿ ಅಡಗಿದ್ದು ಅದನ್ನು ಗುರುತಿಸಿ ಹೊರಗೆಳೆಯುವುದು ಶಿಕ್ಷಕರ ಕಾರ್ಯ ಎಂದು ಹೇಳಿದರು.
ಸಂಸ್ಥೆಯ ಪದವಿ ಪೂರ್ವ ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ ಹಾಗೂ ಶಿಕ್ಷಕ ರಕ್ಷಕ ಸಂಘದ ಪದವಿ ಪೂರ್ವ ವಿಭಾಗದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು. ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್ ಸದಸ್ಯ ವಾಲ್ಟರ್ ಡಿ’ಸೋಜ, ಉಪಪ್ರಾಚಾರ್ಯ ಡಾ. ಪ್ರಕಾಶ್ ಭಟ್, ಶಿಕ್ಷಕ ರಕ್ಷಕ ಸಂಘದ ಪ್ರಾಥಮಿಕ ವಿಭಾಗದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ – ರಕ್ಷಕ ಸಂಘದ ಸದಸ್ಯರಾದ ಉದಯರವಿ ಸ್ವಾಗತಿಸಿ, ರಾಜೇಶ್ ಹಾಗೂ ವಿದ್ಯಾರ್ಥಿನಿ ಜಿಯಾ ಆಂಟೋನಿಯಾ ಕುಟಿನ್ಹೊ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ವಿಭಾಗದ ಅಧ್ಯಕ್ಷೆ ಹೇಮಲತಾ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು. ಸುಪ್ರಿಯಾ, ಜ್ಯೋತಿ ಬಬಿತಾ, ಶಕೀಲಾ ಶೆಟ್ಟಿ, ಸರಿಟಾ ನೊರೋನ್ಹ, ಗ್ರೆಟ್ಟಾ ತಾವ್ರೋ, ಒಲಿವಿಯಾ, ಕವಿತಾ ಪಾಯಸ್, ವನಿತಾ, ಲವಿಟಾ ಡಿ’ಸೋಜ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.