ವಾಸ್ತವ ವಿಚಾರವೇನು ?
ಕಾರ್ಕಳ : ಬೈಲೂರು ಪರಶುರಾಮ ಥೀಮ್ ಪಾರ್ಕ್‌ನಲ್ಲಿನ ಪ್ರತಿಮೆಯ ಗುಣಮಟ್ಟ ಪರೀಕ್ಷೆ ನಡೆಸುವಂತೆ ದಿವ್ಯಾ ನಾಯಕ್ ಮತ್ತವರ ತಂಡ ಆಗ್ರಹಿಸಿರುವ ಕಾರಣ ಇದೀಗ ಮೂರ್ತಿ ಕುರಿತಂತೆ ಒಂದಷ್ಟು ಗೊಂದಲ ಸೃಷ್ಟಿಯಾಗಿದೆ. ಶಿಲ್ಪಕಲೆ, ಪ್ರಾಕೃತಿಕ, ಧಾರ್ಮಿಕ, ಐತಿಹಾಸಿಕ ತಾಣಗಳನ್ನು ಹೊಂದಿರುವ ಕಾರ್ಕಳದ ಹಿರಿಮೆಗೆ ಮತ್ತೊಂದು ಮುಕುಟ ಎಂಬಂತೆ, ಪ್ರವಾಸೋದ್ಯಮವಾಗಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಬೈಲೂರು – ಯರ್ಲಪಾಡಿಯ ಉಮಿಕಲ್ ಕುಂಜದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಗೊಂಡು ಜ. 27ರಂದು ಉದ್ಘಾಟನೆಗೊಂಡಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಥೀಮ್ ಪಾರ್ಕ್ ಲೋಕಾರ್ಪಣೆಗೊಳಿಸಿದ್ದರು.
ಪರಶುರಾಮ ಥೀಮ್ ಪಾರ್ಕ್ ಉದ್ಘಾಟನಾ ಕಾರ್ಯಕ್ರಮ ಅತ್ಯಂತ ವೈಭವದಿಂದ ಜರುಗಿತು. ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ನೆರವೇರಿತು. ಅಂದು ಜನಸಾಗರವೇ ಬೈಲೂರಿಗೆ ಹರಿದುಬಂದಿದ್ದು ಬೈಲೂರು ರಾಜ್ಯದ ಪ್ರವಾಸಿ ತಾಣಗಳಲ್ಲಿ ಒಂದಾಗಿ ಗುರುತಿಸಿಕೊಂಡಿತು.
12 ಕೋಟಿ ಯೋಜನೆ
ಒಟ್ಟು 12 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಂಡಿತ್ತು. ಪ್ರವಾಸೋದ್ಯಮ ಸೇರಿದಂತೆ ಸರಕಾರದ ವಿವಿಧ ಅನುದಾನ ಬಳಸಿಕೊಂಡು ಯೋಜನೆ ರೂಪಿಸಲಾಗಿತ್ತು. ಕಾಮಗಾರಿಯ ಹೊಣೆಯನ್ನು ನಿರ್ಮಿತಿ ಕೇಂದ್ರ ವಹಿಸಿತ್ತು. ಪ್ರವಾಸೋದ್ಯಮ ಇಲಾಖೆಯಿಂದ 6.5 ಕೋಟಿ ರೂ. ಮಂಜೂರಾಗಿದ್ದು ಅದರಲ್ಲಿ 2.67 ಕೋಟಿ ರೂ. ಬಿಡುಗಡೆಯಾಯಿತು. ಉಳಿದ ಮೊತ್ತ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿತಿ ಕೇಂದ್ರಕ್ಕೆ ಸಂದಾಯವಾಗಬೇಕಿದೆ ಎಂದು ಮಾಹಿತಿ ನೀಡಿರುತ್ತಾರೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್.
ಕಂಚಿನ ಪ್ರತಿಮೆ
ಪರಶುರಾಮ ಥೀಮ್ ಪಾರ್ಕ್ ನಲ್ಲಿ ತುಳುನಾಡ ಸೃಷ್ಟಿಕರ್ತ ಪರಶುರಾಮನ ಕಂಚಿನ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ. 2 ಕೋಟಿ ರೂ. ವೆಚ್ಚದಲ್ಲಿ 33 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಿರ್ಮಿತಿ ಕೇಂದ್ರದ ಮೇಲುಸ್ತುವಾರಿಯಲ್ಲಿ ಬೆಂಗಳೂರಿನ ಕೃಷ್ಣ ಆರ್ಟ್ಸ್ ನಿರ್ಮಿಸಿತ್ತು. ಶಿಲ್ಪಿ ಕೃಷ್ಣ ನಾಯಕ್ ಅವರ ಸಾರಥ್ಯದಲ್ಲಿ ಮೂರ್ತಿ ರಚನೆಯಾಗಿತ್ತು. ಅದಕ್ಕಾಗಿ ಸುಮಾರು 10 ಟನ್ ಕಂಚು ಬಳಕೆಯಾಗಿತ್ತು.
ವಿವಾದಕ್ಕೆ ಕಾರಣವಾದ ಅಂಶವಿದು
ಪರಶುರಾಮ ಮೂರ್ತಿಯ ಭಂಗಿ, ಅಡಿಪಾಯ ಮತ್ತು ಕೊಡಲಿಯನ್ನು ಮಾರ್ಪಾಡು (ಹೊಸ ಪ್ರತಿಮೆಯಲ್ಲಿ ಕೊಡಲಿ ತಲೆಗೆ ಅಂಟಿಕೊಂಡಂತೆ ಇರುವುದು) ಮಾಡಬೇಕಾಗಿರುವುದರಿಂದ ಮೂರ್ತಿಯನ್ನು ಕೆಳಗಿಳಿಸಲಾಯಿತು. ಪರಶುರಾಮನ ಮೂರ್ತಿಯಲ್ಲಿನ ಕೊಡಲಿ ಎತ್ತುವ ಭಂಗಿಯನ್ನು ಮಾರ್ಪಾಡಿಸುವ, ಬೆಟ್ಟದ ಮೇಲೆ ಮೂರ್ತಿಯಿರುವ ಕಾರಣ ಸಿಡಿಲಿನಿಂದ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಮಿಂಚು ಬಂಧಕ ಅಳವಡಿಸುವ ಕಾರ್ಯವೂ ಆಗಬೇಕಿತ್ತು. ಹೀಗಾಗಿ ಪ್ರವಾಸಿಗರನ್ನು ನಿರ್ಬಂಧಿಸಿ ಪ್ರತಿಮೆ ಸರಿಪಡಿಸುವ ಮತ್ತು ಥೀಮ್ ಪಾರ್ಕ್‌ನಲ್ಲಿ ಬಾಕಿ ಕೆಲಸ ಪೂರ್ಣಗೊಳಿಸಲು ನಿರ್ಮಿತಿ ಕೇಂದ್ರ ಮುಂದಾಯಿತು.
ಹಸ್ತಾಂತರವಾಗಿಲ್ಲ
ಪರಶುರಾಮ ಥೀಮ್ ಪಾರ್ಕ್ ಕೆಲಸ ಮತ್ತು ಪ್ರತಿಮೆಯ ಕೆಲಸ ಸಂಪೂರ್ಣವಾಗದೇ ಬಾಕಿಯಿರುವ ಕಾರಣ ನಿರ್ಮಿತಿ ಕೇಂದ್ರವು ಪ್ರವಾಸೋದ್ಯಮ ಇಲಾಖೆಗೆ ಯೋಜನೆಯನ್ನು ಹಸ್ತಾಂತರ ಮಾಡಿರಲಿಲ್ಲ. ಕಾಮಗಾರಿ ಪೂರ್ಣಗೊಂಡು ಮೂರನೇ ಸಂಸ್ಥೆಯಿಂದ ಗುಣಮಟ್ಟ ಪರಿಶೀಲನೆಯಾದ ಬಳಿಕವಷ್ಟೇ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡುವುದೆಂದು, ಒಂದೆರಡು ತಿಂಗಳಲ್ಲಿ ಈ ಕಾರ್ಯವಾಗಲಿದೆ ಎಂದು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ತಿಳಿಸಿರುತ್ತಾರೆ.