ಹೆಬ್ರಿ : ನಿವೃತ್ತ ಶಿಕ್ಷಕ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿಯವರ ಸ್ಮರಣಾರ್ಥ ಹೆಬ್ರಿ ಚಾಣಕ್ಯ ಎಜ್ಯುಕೇಶನ್ ಮತ್ತು ಕಲ್ಚರಲ್ ಅಕಾಡೆಮಿಯ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಾರ್ಕಳ ಶ್ರೀ ಭುವನೇಂದ್ರ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಸೀಮಾ ಕಾಮತ್ ಅವರು ಆಯ್ಕೆಯಾಗಿದ್ದಾರೆ.
ಸೀಮಾ ಕಾಮತ್ ಅವರ ಬಗ್ಗೆ
ಸೀಮಾ ಕಾಮತ್ ಅವರು ಕಾಸರಗೋಡು ಜಿಲ್ಲೆಯ ಬಲ್ಲಂಬಟ್ಟುವಿನ ಲಕ್ಷ್ಮಣ್ ಬಾಳಿಗ ಮತ್ತು ಉಷಾ ಎಲ್. ಬಾಳಿಗ ದಂಪತಿ ಪುತ್ರಿ. ಕಾರ್ಕಳದ ಉದ್ಯಮಿ ರಾಮಚಂದ್ರ ಕಾಮತ್ ಅವರ ಪತ್ನಿ. ಎಂ.ಎ, ಬಿ.ಎಡ್ ಪದವೀಧರರಾಗಿರುವ ಇವರು ಸಂಗೀತ, ಯಕ್ಷಗಾನ, ತಾಳಮದ್ದಲೆ, ಕಥೆ, ಕವನ, ಅಭಿನಯಗೀತೆ, ರಂಗೋಲಿ, ಚಿತ್ರಕಲೆ, ನೃತ್ಯ, ಸಾಹಿತ್ಯ ಸಹಿತ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ ಗುರುತಿಸಿಕೊಂಡು ಸಭ್ಯ ಸಮಾಜ ನಿರ್ಮಾಣ ಕಾರ್ಯದಲ್ಲಿ ಸೀಮಾ ಕಾಮತ್ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸೀಮಾ ಕಾಮತ್ ಸ್ವರಚಿತ ಮೂರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಬರವಣೆಗೆಯ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಶ್ಯೆಕ್ಷಣಿಕ, ಸಾಹಿತ್ಯಿಕ, ಧಾರ್ಮಿಕ, ಸಾಂಸ್ಕೃತಿಕ ರಂಗದಲ್ಲಿ ಮಿಂಚುತ್ತಿರುವ ಇವರ ಸೇವೆಯನ್ನು ಗುರುತಿಸಿ ಶಿಕ್ಷಣ ಇಲಾಖೆಯು ಸೇರಿ ವಿವಿಧ ಸಂಘ ಸಂಸ್ಥೆಗಳದ ಪ್ರಶಸ್ತಿ, ಗೌರವ, ಅಭಿನಂದನೆಗಳನ್ನು ಪಡೆದಿದ್ದಾರೆ.
ಪ್ರಶಸ್ತಿ ಪ್ರದಾನ
ಹೆಬ್ರಿ ಎಸ್.ಆರ್.ಸ್ಕೂಲ್ ಬಳಿ ಇರುವ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ಸೆ. 5ರಂದು ಸಂಜೆ 4ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.