ಕಾರ್ಕಳ ನಕ್ಸಲ್ ನಿಗ್ರಹ ಎಸ್‌ಪಿ, ಮಂಗಳೂರು ಕಮಿಷನರ್, ಉಡುಪಿ ಎಸ್‌ಪಿ ಎತ್ತಂಗಡಿ
ಬೆಂಗಳೂರು : ಸರಕಾರ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಮಟ್ಟದ ವರ್ಗಾವರ್ಗಿ ಮಾಡಿದ್ದು, ಮಂಗಳೂರು ಕಮಿಷನರ್, ಉಡುಪಿ ಎಸ್‌ಪಿ ಸೇರಿ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿದೆ. ಒಟ್ಟು 35 ಐಪಿಎಸ್ ಗ್ರೆಢ್ ಅದಿಕಾರಿಗಳನ್ನು ವರ್ಗಾಯಿಸಲಾಗಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ವರ್ಗಾವಣೆ ಸಂಭವಿಸಿದೆ.
ಆರು ತಿಂಗಳ ಹಿಂದೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದ ಮಂಗಳೂರಿನ ಖಡಕ್ ಕಮಿಷನರ್ ಕುಲದೀಪ್ ಜೈನ್ ಅವರನ್ನು ಹುದ್ದೆ ತೋರಿಸದೆ ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ಅನುಪಮ್ ಅಗರ್ವಾಲ್ ಅವರನ್ನು ತರಲಾಗಿದೆ. ಕುಲದೀಪ್ ಜೈನ್ ಮಂಗಳೂರಿನ ಡ್ರಗ್ ಮಾಫಿಯಾ ಮಟ್ಟ ಹಾಕಲು ಅಪಾರವಾಗಿ ಶ್ರಮಿಸಿದ್ದರು.
ಉಡುಪಿ ಎಸ್‌ಪಿ ಅಕ್ಷಯ್ ಹಾಕೆ ಮಚ್ಚಿಂದ್ರ ಅವರನ್ನು ವರ್ಗಾಯಿಸಲಾಗಿದ್ದು, ಅವರ ಸ್ಥಳಕ್ಕೆ ಡಾ.ಅರುಣ್‌ಕುಮಾರ್ ಬಂದಿದ್ದಾರೆ. ಕಾರ್ಕಳ ನಕ್ಸಲ್ ನಿಗ್ರಹ ಪಡೆಯ ಎಸ್‌ಪಿ ನಿಕಮ್ ಪ್ರಕಾಶ್ ಅಮೃತ್ ಅವರು ವೈರ್‌ಲೆಸ್ ವಿಭಾಗದ ಎಸ್‌ಪಿಯಾಗಿ ವರ್ಗವಾಗಿದ್ದಾರೆ. ಉಡುಪಿ ಕರಾವಳಿ ರಕ್ಷಣಾ ಪಡೆಯ ಎಸ್‌ಪಿ ಅಬ್ದುಲ್ ಅಹದ್ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿ ವರ್ಗವಾಗಿದ್ದಾರೆ. ಉಡುಪಿ ಕರಾವಳಿ ರಕ್ಷಣಾ ಪಡೆಯ ಎಸ್‌ಪಿಯಾಗಿ ಅನ್ಶುಕುಮಾರ್ ವರ್ಗವಾಗಿದ್ದಾರೆ.