ದಂಪತಿಗೆ ಹಲ್ಲೆ, ಜಾತಿ ನಿಂದನೆ : ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ದೂರು ದಾಖಲು

ಯೂಟ್ಯೂಬ್‌ ಚಾನೆಲ್‌ಗೆ ಸಂದರ್ಶನ ಕೊಟ್ಟದ್ದಕ್ಕೆ ಹಲ್ಲೆ ಎಂದು ಆರೋಪ

ಬೆಳ್ತಂಗಡಿ : ಸೌಜನ್ಯಾ ಪ್ರಕರಣದ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಹಾಗೂ ಇತರ ಕೆಲವರ ವಿರುದ್ಧ ಉಜಿರೆಯ ಭಾಸ್ಕರ ನಾಯ್ಕ ಎಂಬವರು ಹಲ್ಲೆ ಮತ್ತು ಜಾತಿ ನಿಂದನೆ ದೂರು ದಾಖಲಿಸಿದ್ದಾರೆ.
ಉಜಿರೆ ಗ್ರಾಮದ ಪಣೆಯಾಲು ಭಾಸ್ಕರ್‌ ನಾಯ್ಕ (50) ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ಮಹೇಶ್‌ ಶೆಟ್ಟಿ ತಿಮರೋಡಿ ವಿಚಾರವಾಗಿ ಸಂದರ್ಶನ ನೀಡಿ ಹಿಂದಿರುಗುತ್ತಿದ್ದಾಗ ಭಾಸ್ಕರ್‌ ನಾಯ್ಕ ಮತ್ತು ಅವರ ಪತ್ನಿ ಮೇಲೆ ತಿಮರೋಡಿ ಮತ್ತು ಅವರ ಸಂಗಡಿಗರು ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹೇಶ್‌ ಶೆಟ್ಟಿ ತಿಮರೋಡಿ, ಮೋಹನ್‌ ಶೆಟ್ಟಿ ಪಾಣಿಯಾಲು, ಮುಖೇಶ್‌ ಶೆಟ್ಟಿ, ಪ್ರಜ್ವಲ್‌ ಕೆ.ವಿ. ಗೌಡ, ನೀತು ಶೆಟ್ಟಿ ಪಾಣಿಯಾಲು, ಮತ್ತು ಪ್ರಮೋದ್‌ ಶೆಟ್ಟಿ ಪಾಣಿಯಾಲು ಸೇರಿ ಇತರ ಕೆಲವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಭಾಸ್ಕರ್‌ ನಾಯ್ಕ ಸೆ. 2ರಂದು ಮಂಗಳೂರಿನಲ್ಲಿ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿ ವಾಪಸು ಮನೆಗೆ ಬರುತ್ತಿರುವಾಗ ಸಂಜೆ 5 ಸಂಜೆ ಸುಮಾರಿಗೆ ಉಜಿರೆ ಗ್ರಾಮದ ಪಾಣೆಯಾಲು ತಲುಪಿದಾಗ ಮಹೇಶ್‌ ಶೆಟ್ಟಿ ತಿಮರೋಡಿ ಸೇರಿ ಆರು ಮಂದಿ ಕಾರಿನಲ್ಲಿ ಬಂದು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಾರೆ. ಬಳಿಕ ವಿದ್ಯುತ್‌ ಕಂಬಕ್ಕೆ ಕಟ್ಟಿ ಹಾಕಿ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಭಾಸ್ಕರ ನಾಯ್ಕ ಜೋರಾಗಿ ಬೊಬ್ಬೆ ಹೊಡೆದಾಗ ಮನೆಯಲಿದ್ದ ಪತ್ನಿ ಮಮತಾ ಬಿಡಿಸಲು ಓಡಿ ಬಂದಿದ್ದಾರೆ. ಆಗ ಪ್ರಮೋದ್‌ ಶೆಟ್ಟಿ ಎಂಬಾತ ಪತ್ನಿಗೂ ಕಲ್ಲಿನಿಂದ ಹೊಡೆದಿದ್ದಾರೆ. ಇಬ್ಬರ ಬೊಬ್ಬೆ ಕೇಳಿ ಅದೇ ಮಾರ್ಗವಾಗಿ ಬರುತ್ತಿದ್ದ ಪರಿಚಯದವರಾದ ಜಯಪ್ರಕಾಶ್‌ ಶೆಟ್ಟಿ, ಶಂಕರ ಶೆಟ್ಟಿ, ತಿಮರೋಡಿ ಸುರೇಶ್‌ ನಾಯ್ಕ ಮತ್ತು ಇತರರನ್ನು ನೋಡಿ ಆರೋಪಿಗಳು ಜೀವ ಬೆದರಿಕೆ ಒಡ್ಡಿ ಹೋಗಿದ್ದಾರೆ ಎಂದು ಭಾಸ್ಕರ ನಾಯ್ಕ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಗೊಳಗಾದ ಭಾಸ್ಕರ್‌ ನಾಯ್ಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸೆ.3ರಂದು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.









































































































































































error: Content is protected !!
Scroll to Top