ಬೇಸಿಗೆಯಂತಾದ ಮಳೆಗಾಲ-ಆಕಾಶದತ್ತ ನೋಡುತ್ತಿರುವ ರೈತರು

ಕಾರ್ಕಳ ತಾಲೂಕಿನಲ್ಲಿ 5435 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೇಸಾಯ

ಕಾರ್ಕಳ : ಧಾರಾಕಾರ ಮಳೆಯಿಂದಾಗಿ ಭೂಮಿ ತಂಪಾಗಿ ಮಣ್ಣು ಫಲವತ್ತಾಗಿ ಎಲ್ಲೆಲ್ಲೂ ಹಸಿರು ಸೊಬಗು ಕಣ್ಣಿಗೆ ರಾಚುವ, ತೋಡು, ಹಳ್ಳಕೊಳ್ಳಗಳೆಲ್ಲ ತುಂಬಿ ಹರಿಯಬೇಕಾದ ಸಮಯದಲ್ಲಿ ಸುಡು ಬಿಸಿಲಿನಿಂದಾಗಿ ಭೂಮಿ ಒಣಗಿ ಹೋಗಿದೆ. ಕೃಷಿ ಭೂಮಿಗೆ ನೀರಿಲ್ಲದೆ ಬೆಳೆದ ಬೆಳೆ, ಬಿತ್ತಿದ ಬೀಜ ಕರಟಿ ಹೋಗುತ್ತಿವೆ. ಮಳೆ ನೀರನ್ನೆ ನಂಬಿ ಕೃಷಿ ಮಾಡಿದ ರೈತರು ಮಳೆಗಾಗಿ ಆಕಾಶದತ್ತ ನೋಡುತ್ತಿದ್ದಾರೆ.

122 ವರ್ಷಗಳ ಬಳಿಕ ದಾಖಲೆ
ರಾಜ್ಯದಲ್ಲಿ ಆಗಸ್ಟ್‌ನಲ್ಲಿ ಶೇ. 73ರಷ್ಟು ಮಳೆ ಕೊರತೆಯಾಗಿದೆ. ಪರಿಣಾಮವಾಗಿ ಕೆರೆ, ಬಾವಿ, ಹಳ್ಳಕೊಳ್ಳಗಳೆಲ್ಲ ಬತ್ತುತ್ತಿವೆ. ಮೋಡ ಕವಿದ ವಾತಾವರಣವಿದ್ದರೂ ಮಳೆ ಬರುತ್ತಿಲ್ಲ. ಜುಲೈ ತಿಂಗಳ ಕೊನೆಯಲ್ಲಿ ಸುರಿದ ಮಳೆಯನ್ನು ಗಮನಿಸಿದರೆ ಈ ವರ್ಷ ಭರಪೂರ ಮಳೆಯಾಗುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ, ಉರಿ ಬಿಸಿಲು ಆ ನಿರೀಕ್ಷೆಯನ್ನು ಸುಟ್ಟು ಹಾಕಿದೆ. 1901 ರಿಂದ ಮಳೆ ಪ್ರಮಾಣ ದಾಖಲಿಸುವ ಕಾರ್ಯ ಆರಂಭವಾಗಿದ್ದು, ಹವಾಮಾನ ತಜ್ಞರ ಪ್ರಕಾರ ಕಳೆದ 122 ವರ್ಷಗಳಿಂದ ಆಗಸ್ಟ್ ತಿಂಗಳಿನಲ್ಲಿ ಇಷ್ಟು ಕಡಿಮೆ ಮಳೆಯಾಗಿರುವುದು ಇದೇ ಮೊದಲು. ಹವಾಮಾನ ಇದೇ ರೀತಿ ಮುಂದುವರಿದರೆ ಮುಂದಿನ ಬೇಸಿಗೆಯಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಿಯೇ ಜನರು ದಿಗಿಲುಗೊಳ್ಳುತ್ತಿದ್ದಾರೆ.

ಈ ವರ್ಷ ಜೂನ್ ಎರಡನೇ ವಾರಕ್ಕೆ ಮಳೆ ಆರಂಭವಾಯಿತು ಎನ್ನುವಾಗಲೇ ಎಲ್‌ನೋ ಚಂಡಮಾರುತ ಮಳೆಯ ಮಾರುತದ ದಿಕ್ಕು ತಪ್ಪಿಸಿತ್ತು. ಪರಿಣಾಮವಾಗಿ ಜೂನ್ ತಿಂಗಳು ಪೂರ್ತಿ ಸರಿಯಾಗಿ ಮಳೆ ಸುರಿಯಲಿಲ್ಲ. ಬಳಿಕ ಜುಲೈ ತಿಂಗಳ ಕೊನೆಯಲ್ಲಿ ಸುರಿದ ಮಳೆ ಪ್ರವಾಹವನ್ನೇ ಸೃಷ್ಟಿ ಮಾಡಿತ್ತು. ಆದರೆ ಆ ಮಳೆಯ ಅಬ್ಬರ ಕೇವಲ ಒಂದು ವಾರಕ್ಕೆ ಮಾತ್ರ ಸೀಮಿತವಾಗಿತ್ತು. ಈಗ ಬೇಸಿಗೆಯನ್ನು ಮೀರಿಸುವ ಬಿಸಿಲು ಜನರಲ್ಲಿ ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ ಶೇ. 70 ಮಳೆಯ ಕೊರತೆ
ಉಡುಪಿ ಜಿಲ್ಲೆಯಲ್ಲಿ ಈ ವರ್ಷ ಆಗಸ್ಟ್‌ನಲ್ಲಿ 999 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ ಕೇವಲ 300 ಮಿ.ಮೀ ಮಾತ್ರ ಮಳೆಯಾಗಿದೆ. ಶೇ. 70ರಷ್ಟು ಮಳೆ ಕೊರತೆ ಉಂಟಾಗಿರುವುದರಿಂದ ಭತ್ತದ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮೇ ತಿಂಗಳಲ್ಲಿ 164 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 45 ಮಿ.ಮೀ ಮಳೆಯಾಗಿದ್ದು ಶೇ 73 ಮಳೆ ಕೊರತೆಯಾದರೆ, ಜೂನ್‌ನಲ್ಲಿ 1,106 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 519 ಮಿ.ಮೀ ಮಳೆ ಸುರಿದಿದ್ದು ಶೇ 53ರಷ್ಟು ಕೊರತೆಯಾಗಿದೆ. ಜೂ. 1ರಿಂದ ಆ. 28ರವರೆಗೆ ಜಿಲ್ಲೆಯಲ್ಲಿ 3,553 ಮಿ.ಮೀ ವಾಡಿಕೆ ಮಳೆಗೆ 2.625 ಮಿ.ಮೀ, ಮಳೆಯಾಗಿದ್ದು ಶೇ. 26 ರಷ್ಟು ಮಳೆ ಕೊರತೆಯಾಗಿದೆ. ಪ್ರಸಕ್ತ ವರ್ಷ 3,754 ಮಿ.ಮೀ ವಾಡಿಕೆ ಮಳೆಗೆ ಪ್ರತಿಯಾಗಿ 2,678 ಮಿ.ಮೀ ಮಳೆ ಬಿದ್ದಿದ್ದು ಶೇ 29ರಷ್ಟು ಮಳೆ ಕೊರತೆಯಾಗಿದೆ.

ಈ ವರ್ಷ ಜುಲೈನಲ್ಲಿ ಮಾತ್ರ ವಾಡಿಕೆ ಮಳೆ 1,448 ಮಿ.ಮೀ. ಗೆ ಪ್ರತಿಯಾಗಿ 1,805 ಮಿ.ಮೀ ಮಳೆಯಾಗಿದ್ದು ಉಳಿದ ಎಲ್ಲ ತಿಂಗಳಲ್ಲೂ ಕಡಿಮೆ ಮಳೆ ಬಿದ್ದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ.

ಕೃಷಿಗೆ ಹೊಡೆತ
ಈ ವರ್ಷ ಮಳೆಯ ವಿಳಂಬದಿಂದಾಗಿ ಬೇಸಾಯದ ಪ್ರಾರಂಭ ವಿಳಂಬಗೊಂಡಿದ್ದರೂ, ಜುಲೈ ತಿಂಗಳಲ್ಲಿ ಸುರಿದ ಮಳೆ ರೈತರಲ್ಲಿ ಭರವಸೆ ಮೂಡಿಸಿ ಬೇಸಾಯ ಪ್ರಾರಂಭ ಮಾಡಿದ್ದರು. ಆದರೆ ಆಗ ಪ್ರವಾಹದಂತೆ ಸುರಿದ ಮಳೆಗೆ ಕೃಷಿ ಹಾನಿಯಾಗಿತ್ತು. ಇದೀಗ ನೇಜಿ ಬೆಳೆದು ಹದಗೊಳ್ಳುತ್ತಿರುವ ಸಮಯದಲ್ಲಿ ಮಳೆ ಕೈಕೊಟ್ಟಿದ್ದು, ಬಿಸಿಲಿನ ತಾಪಕ್ಕೆ ಬೆಳೆದ ಬೆಳೆ ನಾಶವಾಗುತ್ತಿದೆ. ಸಾಕಷ್ಟು ನೀರಿನ ವ್ಯವಸ್ಥೆ ಇರುವ ರೈತರು ಪಂಪ್‌ ಮೂಲಕ ಗದ್ದೆಗೆ ನೀರುಣಿಸುವ ಕೆಲಸ ಮಾಡುತ್ತಿದ್ದಾರೆ. ಮಳೆ ನೀರನ್ನೇ ನಂಬಿ ಬೇಸಾಯ ಮಾಡಿದ ರೈತರ ಪಾಡನ್ನು ಕೇಳುವವರೇ ಇಲ್ಲದಾಗಿದೆ.

ಅಧಿಕ ಭಿತ್ತನೆ
ಕಳೆದ ವರ್ಷ ಕಾರ್ಕಳ – ಹೆಬ್ರಿ ಭಾಗದಲ್ಲಿ ಒಟ್ಟು 6456 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬಿತ್ತನೆಯಾಗಿತ್ತು. 2023 ರಲ್ಲಿ ಕಾರ್ಕಳ ತಾಲೂಕಿನಲ್ಲಿ 5435 ಹೆಕ್ಟೇರ್‌ ಪ್ರದೇಶದಲ್ಲಿ ಹಾಗೂ ಹೆಬ್ರಿ ತಾಲೂಕಿನಲ್ಲಿ 1200 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬಿತ್ತನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಧಿಕ ಭಿತ್ತನೆ ಆಗಿದೆ. ಆದರೆ, ಮಳೆಯ ಕೊರತೆ ಬೆಳೆಯನ್ನು ನಾಶ ಮಾಡುತ್ತಿರುವುದು ವಿಷಾದನೀಯ.

ಅನಾವೃಷ್ಟಿ ಮತ್ತು ಅತಿವೃಷ್ಟಿಯಿಂದಾಗಿ ರೈತರಿಗೆ ಯಾವತ್ತೂ ಸಮಸ್ಯೆಯೇ. ಈ ಬಾರಿಯಂತು ಹವಾಮಾನದ ವೈಪರಿತ್ಯದಿಂದಾಗಿ ಮಳೆಯ ಕೊರತೆಯಾಗಿದ್ದು, ಮುಂದೇನು ಎಂದು ಚಿಂತಿಸುವಂತಾಗಿದೆ. ಇನ್ನು ರಾಜ್ಯ ಸರಕಾರ ತಮಿಳುನಾಡಿಗೆ ಬೇಕಾಬಿಟ್ಟಿಯಾಗಿ ನೀರು ಬಿಡುತ್ತಿದೆ. ಆದರೆ, ನೀರಿಲ್ಲದೆ ಪರದಾಡುತ್ತಿರುವ ರಾಜ್ಯದ ರೈತರ ಸಂಕಷ್ಟವನ್ನು ಕೇಳುತ್ತಿಲ್ಲ. ಈ ರೀತಿಯೇ ಮುಂದುವರಿದಲ್ಲಿ ಮಳೆಯನ್ನೇ ನಂಬಿ ಕೃಷಿ ಮಾಡಿದ ನಮ್ಮಂತಹ ರೈತರ ಜೀವನ ಅಸ್ತವ್ಯಸ್ತವಾಗುವುದರಲ್ಲಿ ಅನುಮಾನವಿಲ್ಲ.
– ಧರಣೇಂದ್ರ ಜೈನ್‌ ಶಿರ್ಲಾಲು
ಪ್ರಗತಿಪರ ಕೃಷಿಕರು

ನೀರಿಲ್ಲದೆ ಕೃಷಿ ಭೂಮಿಯು ಬರಡಾಗುತ್ತಿದ್ದು, ಈ ಕುರಿತು ಸರಕಾರ ಯೋಚಿಸುತ್ತಿಲ್ಲ. ರೈತರ ಸಂಕಷ್ಟ ಪರಿಹರಿಸುವ ಬದಲು ಯಾರದೋ ಮನವೋಲೈಕೆಯ ಕೆಲಸ ಮಾಡುತ್ತಿದೆ. ಅನಾವಶ್ಯಕವಾಗಿ ಲೋಡ್‌ ಶೆಡ್ಡಿಂಗ್‌ ಮಾಡುತ್ತಿದ್ದು, ಪರಿಣಾಮವಾಗಿ ಸಕಾಲಕ್ಕೆ ಕೃಷಿ ಭೂಮಿಗೆ ಪರ್ಯಾರ್ಯವಾಗಿಯೂ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಮಾನವನ ಪ್ರಕೃತಿ ವಿರೋಧಿ ಚಟುವಟಿಕೆಗಳ ಪರಿಣಾಮವಾಗಿ ಹವಾಮಾನ ವೈಪರೀತ್ಯ ಉಂಟಾಗಿ ಮಳೆಯ ಕೊರೆತೆಯಾಗಿದೆ. ಹೀಗೆ ಮುಂದುವರಿದಲ್ಲಿ ರೈತರ ಜೀವನ ಸಂಕಷ್ಟಕ್ಕೆ ಸಿಲುಕುವುದು ಮಾತ್ರವಲ್ಲದೆ, ಪ್ರತಿಯೊಬ್ಬರೂ ತುತ್ತು ಅನ್ನಕ್ಕೂ ಪರದಾಡುವಂತಾಗುತ್ತದೆ.
– ಜಯ ಶೆಟ್ಟಿ ಮದರಟ್ಟ, ಕೌಡೂರು
ಪ್ರಗತಿಪರ ಕೃಷಿಕರು

ವರದಿ : ನಳಿನಿ ಎಸ್.‌ ಸುವರ್ಣerror: Content is protected !!
Scroll to Top