ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಸಂಚರಿಸುವವರಿಗೆ ಮಾರ್ಗ ಬದಲಾವಣೆ
ಬೆಳ್ತಂಗಡಿ : ಸೌಜನ್ಯಾಳಿಗೆ ನ್ಯಾಯ ಒದಗಿಸಿಕೊಡಲು ಬೆಳ್ತಂಗಡಿಯಲ್ಲಿ ಇಂದು ಬೃಹತ್ ಸಭೆ ನಡೆಯಲಿದೆ. ಹೋರಾಟದ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಸೇರಿ ಹಲವು ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬೆಳ್ತಂಗಡಿ ಪ್ರತಿಭಟನಾ ಸಭೆಯಲ್ಲಿ ಸುಮಾರು ಒಂದೂವರೆ ಲಕ್ಷ ಜನ ಸೇರುವ ಸಾಧ್ಯತೆ ಇದೆ ಎಂದು ಸಂಘಟಕರು ಹೇಳಿಕೊಂಡಿದ್ದಾರೆ.
ಆದರೆ ಕಡಿಮೆ ಎಂದರೂ ಸುಮಾರು 50 ಸಾವಿರ ಜನ ಸೇರಬಹುದು ಎಂದು ಲೆಕ್ಕಾಚಾರ ಮಾಡಿರುವ ಪೊಲೀಸರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಬೆಳ್ತಂಗಡಿ ಪೇಟೆಯಲ್ಲಿ ಜನ ಸಂದಣಿ ಮತ್ತು ವಾಹನಗಳಿಂದಾಗಿ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ 73ರ ಮಾರ್ಗ ಬದಲಾವಣೆ ಮಾಡಲಾಗಿದೆ.
ಬೆಳ್ತಂಗಡಿ ಪೇಟೆ ಮೂಲಕ ಹೋಗುವ ಕಡೂರು-ಬಂಟ್ವಾಳ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕೊಯ್ಯೂರು ಕ್ರಾಸ್ ರಸ್ತೆಯ ಮೂಲಕ ಆದ್ರುಪೆರಾಲ್ ಮುಖಾಂತರ ಪರಪ್ಪು ಗೇರುಕಟ್ಟೆಯಾಗಿ ಮಂಗಳೂರು ಕಡೆಗೆ ಸಂಚರಿಸಲು ಹಾಗೆಯೇ ಮಂಗಳೂರಿನಿಂದ ಉಜಿರೆ ಕಡೆಗೆ ಬರುವ ಎಲ್ಲ ವಾಹನಗಳನ್ನು ಗುರುವಾಯನಕೆರೆಯಲ್ಲಿ, ಉಪ್ಪಿನಂಗಡಿ ರಸ್ತೆ ಮೂಲಕ ಪರಪ್ಪು ಕ್ರಾಸ್‌ನಲ್ಲಿ ಆದ್ರುಪೆರಾಲ್ ಮುಖಾಂತರ ಸಂಚರಿಸಲು ಮತ್ತು ಉಳಿದ ಸಣ್ಣ ವಾಹನಗಳನ್ನು ಚರ್ಚ್ ಕ್ರಾಸ್‌ನಿಂದ ಕನ್ನಾಜೆ, ಪಡ್ಲಾಡಿ, ಲಾೖಲ ಮಾರ್ಗವಾಗಿ ಉಜಿರೆ ಕಡೆ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.