ಸೆ.22ರ ಬಳಿಕ ಮರಳಿ ಕಾರ್ಯಾಚರಣೆ ನಡೆಸುವ ಬಗ್ಗೆ ವಿಜ್ಞಾನಿಗಳ ನಿರೀಕ್ಷೆ
ಹೊಸದಿಲ್ಲಿ : ಚಂದ್ರ ಶೋಧಕ್ಕೆ ತೆರಳಿರುವ ಚಂದ್ರಯಾನ-3 ಮಿಷನ್‌ನ ಪ್ರಜ್ಞಾನ್ ರೋವರ್ ತನ್ನ ಕೆಲಸವನ್ನು ಪೂರ್ಣಗೊಳಿಸಿ ಸದ್ಯಕ್ಕೆ ನಿದ್ದೆಗೆ ಜಾರಿದೆ. ಪ್ರಜ್ಞಾನ್ ರೋವರ್ ಅನ್ನು ಸ್ಲೀಪ್ ಮೋಡ್‌ನಲ್ಲಿ ಇರಿಸಲಾಗಿದೆ ಎಂದು ಇಸ್ರೊ ಮಾಹಿತಿ ನೀಡಿದೆ.
ಅದರ ಪೇಲೋಡ್‌ಗಳಾದ APXS ಮತ್ತು LIBS ಎರಡನ್ನೂ ಸ್ಥಗಿತಗೊಳಿಸಲಾಗಿದೆ. ಲ್ಯಾಂಡರ್ ಮೂಲಕ ಭೂಮಿಯ ಮೇಲೆ ಪೇಲೋಡ್‌ನ ಎಲ್ಲ ಡೇಟಾವನ್ನು ಸ್ವೀಕರಿಸಲಾಗಿದೆ ಎಂದು ಇಸ್ರೊ ತಿಳಿಸಿದೆ.
ಪ್ರಜ್ಞಾನ್ ರೋವರ್ ಚಂದ್ರನಲ್ಲಿ ಸೂರ್ಯಾಸ್ತವಾದ ನಂತರ ಸ್ಲೀಪ್ ಮೋಡ್‌ಗೆ ಹೋಗಿದೆ. ಆದರೆಅದರ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಿದೆ ಎಂದು ಇಸ್ರೊ ತಿಳಿಸಿದೆ. ಸೆಪ್ಟೆಂಬರ್ 22ರಂದು ಚಂದ್ರನಲ್ಲಿ ಮತ್ತೆ ಹಗಲಾಗಲಿದ್ದು, ಸೂರ್ಯನ ಬೆಳಕು ಅದರ ಸೌರ ಫಲಕಗಳ ಮೇಲೆ ಬೀಳುವ ರೀತಿಯಲ್ಲಿ ಇದನ್ನು ನಿಲ್ಲಿಸಲಾಗಿದೆ. ಇದರ ರಿಸೀವರ್ ಆನ್ ಆಗಿದೆ. ಇದು ಸೆ.22ರಂದು ಮತ್ತೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಎಂದು ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ಚಂದ್ರಯಾನ 14 ದಿನಗಳ ಮಿಷನ್ ಆಗಿತ್ತು. ಏಕೆಂದರೆ ಚಂದ್ರನ ಮೇಲಿನ ಒಂದು ದಿನ ಭೂಮಿಯ ಮೇಲಿನ 14 ದಿನಗಳಿಗೆ ಸಮಾನವಾಗಿರುತ್ತದೆ. ರೋವರ್ ಲ್ಯಾಂಡರ್ ಅನ್ನು ಸೂರ್ಯನಿಂದ ಪಡೆಯುವ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಿ ಕಾರ್ಯಾಚರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈಗ ಚಂದ್ರನ ಮೇಲೆ ರಾತ್ರಿಯಾಗಿರುವುದರಿಂದ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅವರು ಸ್ಲೀಪ್ ಮೋಡ್‌ನಲ್ಲಿರುತ್ತದೆ. ಂಉಂದಿನ 14 ದಿನ ಚಂದ್ರನಲ್ಲಿ ಚಳಿ ಮೈನಸ್ 180 ಡಿಗ್ರಿ ತನಕ ಇರುತ್ತದೆ. ಇಂಥ ತೀವ್ರ ಚಳಿಯಲ್ಲಿ ಉಪಕರಣ ಸುರಕ್ಷಿತವಾಗಿದ್ದರೆ ಮತ್ತೆ ಸೌರಶಕ್ತಿಯಿಂದ ಕೆಲಸ ಆರಂಭಿಸಬಹುದು ಎಂದು ಇಸ್ರೊ ಭರವಸೆ ವ್ಯಕ್ತಪಡಿಸಿದೆ.