ಪಾಕಿಸ್ಥಾನಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡದ ವರುಣ
ಪಲ್ಲೆಕಿಲೆ : ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿದ್ದ ಭಾರತ-ಪಾಕಿಸ್ಥಾನ ಕ್ರಿಕೆಟ್ ಪಂದ್ಯ ಮಳೆಯಲ್ಲಿ ಕೊಚ್ಚಿಹೋಗಿದೆ. ಭಾರತ ಮೊದಲು ಬ್ಯಾಟಿಂಗ್ ಮಾಡಿ ಮಳೆಯ ಅಡ್ಡಿಯ ನಡುವೆ 266 ರನ್ ಪೇರಿಸಿದರೂ ನಂತರ ಸುರಿದ ಮಳೆ ಪಾಕಿಸ್ಥಾನಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ಕೊಡಲಿಲ್ಲ. ಹೀಗಾಗಿ ಅಂಪಾಯರ್‌ಗಳು ಪಂದ್ಯ ರದ್ದುಗೊಳಿಸಿ ಅಂಕ ಹಂಚಿದರು. ಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 266 ರನ್‌ಗಳಿಗೆ ಆಲೌಟ್ ಆಗಿತ್ತು. ಇದಾದ ಬಳಿಕ ಬಾಬರ್ ಅಜಂ ನಾಯಕತ್ವದ ಪಾಕಿಸ್ಥಾನ ಬ್ಯಾಟಿಂಗ್‌ಗೆ ಆರಂಭಿಸಬೇಕಿತ್ತು. ಆದರೆ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಬೇಕಾಯಿತು. ಮಳೆ ನಿಲ್ಲದ ಸೂಚನೆಗಳು ಕಾಣಿಸಿದ್ದರಿಂದ ಪಂದ್ಯವನ್ನು ರದ್ದು ಮಾಡಲಾಯಿತು.
ಈ ಪಂದ್ಯ ರದ್ದಾದ ಕಾರಣ ಪಾಕಿಸ್ಥಾನ ನಿರಾಯಾಸವಾಗಿ ಸೂಪರ್-4 ಹಂತಕ್ಕೆ ತಲುಪಿದೆ. ಈ ಬಾರಿಯ ಏಷ್ಯಾಕಪ್‌ನಲ್ಲಿ ಸೂಪರ್-4 ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾಕಿಸ್ಥಾನ ಪಾಲಾಗಿದೆ. ಇದೀಗ ಭಾರತ ತಂಡ ಏಷ್ಯಾಕಪ್‌ನಲ್ಲಿ ತನ್ನ ಎರಡನೇ ಪಂದ್ಯವನ್ನು ನೇಪಾಳದೊಂದಿಗೆಆಡಬೇಕಾಗಿದೆ. ಈ ಪಂದ್ಯ ಸೆಪ್ಟೆಂಬರ್ 4 ರಂದು ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಗೆದ್ದರೆ ಭಾರತ ತಂಡ ಸೂಪರ್-4 ಹಂತಕ್ಕೂ ತಲುಪಲಿದೆ. ಸೋತರೆ ನೇಪಾಳ ಅರ್ಹತೆ ಪಡೆಯಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 66 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ನಾಯಕ ರೋಹಿತ್ ಶರ್ಮಾ (11), ವಿರಾಟ್ ಕೊಹ್ಲಿ (4), ಶುಭಮನ್ ಗಿಲ್ (10) ಮತ್ತು ಶ್ರೇಯಸ್ ಅಯ್ಯರ್ (14) ಅಗ್ಗದ ಮೊತ್ತಕ್ಕೆ ಔಟಾದರು. ಇದಾದ ನಂತರ ಇಶಾನ್ ಕಿಶನ್ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆಗೂಡಿ ಭಾರತದ ಇನ್ನಿಂಗ್ಸ್ ನಿಭಾಯಿಸಿದರು. ಇಬ್ಬರೂ 5ನೇ ವಿಕೆಟ್‌ಗೆ 138 ರನ್‌ಗಳ ದಾಖಲೆಯ ಜೊತೆಯಾಟ ನಡೆಸಿದರು.
ಇಶಾನ್ 81 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 82 ರನ್ ಗಳಿಸಿದರು. ಪಾಂಡ್ಯ 90 ಎಸೆತಗಳಲ್ಲಿ 87 ರನ್ ಗಳಿಸಿದರು. ಈ ಆಟಗಾರರು ಔಟಾಗುವ ಮುನ್ನ ಭಾರತದ ಸ್ಕೋರ್ 200 ದಾಟಿತ್ತು.
ಇದು ಏಕದಿನದಲ್ಲಿ ಇಶಾನ್ ಕಿಶನ್ ಅವರ ಆರನೇ ಅರ್ಧಶತಕವಾಗಿದೆ. ಇದು ಸತತ ನಾಲ್ಕನೇ ಏಕದಿನದಲ್ಲಿ ಇಶಾನ್ ಅವರ ನಾಲ್ಕನೇ ಅರ್ಧಶತಕವಾಗಿದೆ. ಏಷ್ಯಾ ಕಪ್‌ಗೆ ಮುನ್ನ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮೂರು ಪಂದ್ಯಗಳ ODI ಸರಣಿಯಲ್ಲಿ ಅವರು ಸತತ 3 ಅರ್ಧಶತಕಗಳನ್ನು ಗಳಿಸಿದರು. ಇದೀಗ ಪಾಕಿಸ್ತಾನದ ವಿರುದ್ಧ ಸತತ ನಾಲ್ಕನೇ ಅರ್ಧಶತಕ ಗಳಿಸಿದ್ದಾರೆ. ಇಶಾನ್ ಮತ್ತು ಪಾಂಡ್ಯ ಅವರ ಇನ್ನಿಂಗ್ಸ್‌ನಿಂದಾಗಿ ಭಾರತ ತಂಡ ಪಂದ್ಯದಲ್ಲಿ 266 ರನ್ ಗಳಿಸಿತು. ಪಾಕಿಸ್ಥಾನದ ಬೌಲರ್‌ಗಳಲ್ಲಿ ವೇಗದ ಬೌಲರ್‌ಗಳಾದ ಶಾಹೀನ್ ಶಾ ಆಫ್ರಿದಿ ಮತ್ತು ಹ್ಯಾರಿಸ್ ರೌಫ್ ಅವರ ಮ್ಯಾಜಿಕ್ ಮಾತ್ರ ಕೆಲಸ ಮಾಡಿದೆ. ಅಫ್ರಿದಿ 31 ರನ್ ನೀಡಿ 4 ವಿಕೆಟ್ ಪಡೆದರೆ ಹ್ಯಾರಿಸ್ 53 ರನ್ ನೀಡಿ 3 ವಿಕೆಟ್ ಪಡೆದರು. ನಸೀಮ್ ಶಾ 3 ವಿಕೆಟ್ ಪಡೆದಿದ್ದಾರೆ.