ಕರಾವಳಿಯ ಡ್ರಗ್‌ ಜಾಲದ ಕಿಂಗ್‌ಪಿನ್‌ ಬಂಧನ

ಬೆಂಗಳೂರಿನಲ್ಲಿದ್ದು ಡ್ರಗ್‌ ಪೂರೈಕೆ ಮಾಡುತ್ತಿದ್ದ ನೈಜಿರಿಯಾ ಮಹಿಳೆ

ಮಂಗಳೂರು : ಸಿಸಿಬಿ ಪೊಲೀಸರು ಕರಾವಳಿಗೆ ಮಾದಕ ವಸ್ತು ಪೂರೈಕೆ ಮಾಡುವ ಡ್ರಗ್ಸ್‌ ಜಾಲದ ಕಿಂಗ್‌ಪಿನ್‌ ಎನ್ನಲಾದ ನೈಜಿರಿಯಾ ಮೂಲದ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಯಲಹಂಕ ಜಕ್ಕೂರಿನ ಚೊಕ್ಕನಹಳ್ಳಿ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದ, ನೈಜೀರಿಯಾ ಮೂಲದ ಅಡೆವೊಲೆ ಅಡೆಟುಟು ಆನು ಆಲಿಯಾಸ್‌ ರೆಜನಾ ಜರಾ ಆಲಿಯಾಸ್‌ ಆಯಿಶಾ(33) ಬಂಧಿತ ಮಹಿಳೆ. ಈಕೆಯ ಬಳಿಯಿದ್ದ 20 ಲ.ರೂ. ಮೌಲ್ಯದ 400 ಗ್ರಾಂ ತೂಕದ ಮಾದಕ ವಸ್ತು ಎಂಡಿಎಂಎ ವಶಕ್ಕೆ ಪಡೆದುಕೊಳ್ಳಲಾಗಿದೆ.
ವ್ಯಾಸಂಗ ವೀಸಾದಡಿಯಲ್ಲಿ ಭಾರತಕ್ಕೆ ಬಂದು ವಿದ್ಯಾಭ್ಯಾಸ ಮಾಡಿಕೊಂಡು ಅನಂತರ ಇಲ್ಲಿ ಸ್ವಲ್ಪ ಸಮಯ ನರ್ಸಿಂಗ್‌ ಕೆಲಸ ಮಾಡಿಕೊಂಡಿದ್ದಳು. ನರ್ಸಿಂಗ್‌ ಕೆಲಸ ಬಿಟ್ಟು ಮಾದಕ ವಸ್ತುಗಳ ಮಾರಾಟ ದಂಧೆ ನಡೆಸುತ್ತಿದ್ದಳು.
ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಇತ್ತೀಚೆಗೆ ಪ್ರಮುಖ ಡ್ರಗ್ಸ್‌ ಪೆಡ್ಲರ್‌ಗಳನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಎಂಡಿಎಂಎನ್ನು ವಶಪಡಿಸಿಕೊಂಡಿದ್ದರು. ಉಳ್ಳಾಲ, ಸೆನ್‌ ಪೊಲೀಸ್‌ ಠಾಣೆ, ಮಂಗಳೂರು ಉತ್ತರ, ಕಂಕನಾಡಿ ನಗರ, ಕೊಣಾಜೆ, ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ 7 ಡ್ರಗ್ಸ್‌ ಪ್ರಕರಣದ ಆರೋಪಿಗಳು ಈಕೆಯಿಂದಲೇ ಡ್ರಗ್ಸ್‌ ಖರೀದಿಸಿದ್ದರು. ಅವರ ವಿಚಾರಣೆ ವೇಳೆ ಈಕೆಯ ಮಾಹಿತಿ ಲಭ್ಯವಾಗಿತ್ತು.
ಈಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ ಹೆಗಡೆ, ಪೊಲೀಸ್‌ ನಿರೀಕ್ಷಕ ಶ್ಯಾಮ್‌ ಸುಂದರ್‌ ಎಚ್‌.ಎಂ, ಪಿಎಸ್‌ಐಯವರಾದ ರಾಜೇಂದ್ರ ಬಿ, ಶರಣಪ್ಪ ಭಂಡಾರಿ, ಸುದೀಪ್‌ ಎಂ ವಿ, ನರೇಂದ್ರ ಹಾಗೂ ಸಿಸಿಬಿ ಸಿಬಂದಿ ಪಾಲ್ಗೊಂಡಿದ್ದರು.









































































































































































error: Content is protected !!
Scroll to Top