ಕಾರ್ಕಳ : ಬೈಲೂರು ಉಮಿಕ್ಕಲ್ ಬೆಟ್ಟದ ಮೇಲೆ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿರುವ ಪರಶುರಾಮ ಥೀಮ್ ಪಾರ್ಕ್‌ನಲ್ಲಿನ ಪ್ರತಿಮೆ ಕುರಿತು ಬೆರಳೆಣಿಕೆ ಮಂದಿ ಅಪಪ್ರಚಾರ ನಡೆಸುತ್ತಿರುವುದು ವಿಷಾದನೀಯ. ಇಲ್ಲಸಲ್ಲದ ಆರೋಪ ಹೊರಿಸಿ ಬೈಲೂರು ಹೆಸರಿಗೆ ಕಳಂಕ ತರುವುದು ಖೇದಕರ. ಪರಶುರಾಮ ಥೀಮ್ ಪಾರ್ಕ್ ನಿರ್ಮಾಣದೊಂದಿಗೆ ಬೈಲೂರಿನ ಹೆಸರು ಜಗದಗಲ ಪ್ರಸಿದ್ಧಿ ಪಡೆಯುತ್ತಿರುವಾಗ ಕೇವಲ ಕೆಲವು ವ್ಯಕ್ತಿಗಳ ರಾಜಕೀಯ ಹಿತದೃಷ್ಟಿಯಿಂದ ಆ ಖ್ಯಾತಿಗೆ ಮಸಿ ಬಳಿಯುವ ಕಾರ್ಯವಾಗುತ್ತಿರುವುದು ಖಂಡನೀಯ ಎಂದು ಬೈಲೂರಿನ ಶಿವಾಯ ಗೆಳೆಯರ ಬಳಗ ಪ್ರಕಟನೆಯಲ್ಲಿ ತಿಳಿಸಿದೆ.
ಪ್ರಚಾರದ ತೆವಲಿಗಾಗಿ ನಮ್ಮೂರಿನ ಹೆಸರು ಕೆಡಿಸದಿರಿ
ಕೇವಲ ಪುಕ್ಸಟ್ಟೆ ಪ್ರಚಾರಕ್ಕಾಗಿ ಬೈಲೂರಿನ ಹೆಸರು ಎಳೆದು ತರಬೇಡಿ. ಪ್ರಚಾರಕ್ಕಾಗಿ ಬೇರೆ ದಾರಿ ಹಿಡಿಯಿರಿ. ಚುನಾವಣೆ ಈಗಾಗಲೇ ಮುಗಿದುಹೋಗಿದೆ. ನಿಮ್ಮ ರಾಜಕೀಯ ಕಾರಣಕ್ಕಾಗಿ ಪೂರ್ವಗ್ರಹಪೀಡಿತರಾಗಿ ನಮ್ಮೂರಿನ ಹೆಸರು ಬಳಸುವುದನ್ನು ನಾವು ಖಂಡಿಸುತ್ತೇವೆ. ನಿಮ್ಮ ಇಂತಹ ನೀಚ ಕೃತ್ಯಗಳಿಗೆ ಜನರಿಂದ ಸ್ಪಂದನೆ ದೊರೆಯದು. ಜನತೆ ಪ್ರಜ್ಞಾವಂತರು. ನಿಮ್ಮ ಇಂತಹ ಕೀಳು ಮಟ್ಟದ ಕಾರ್ಯಗಳು ಮುಂದುವರಿದಲ್ಲಿ ಇಡೀ ಬೈಲೂರು ಜನತೆ, ಸಂಘ-ಸಂಸ್ಥೆಗಳು ಒಂದಾಗಿ ತಕ್ಕ ಉತ್ತರ ನೀಡಲಿದೆ. ನಿಮ್ಮ ವಿರುದ್ಧ ನಾವು ಹೋರಾಟಕ್ಕಿಳಿಯಬೇಕಾದಿತು ಎಂದು ಶಿವಾಯ ಗೆಳೆಯರ ಬಳಗ ಎಚ್ಚರಿಸಿದೆ.
ಸಾಧ್ಯವಾದಲ್ಲಿ ಸಹಕಾರ ನೀಡಿ
ಪ್ರತಿಯೊಂದು ಅಭಿವೃದ್ಧಿ ಕಾರ್ಯವನ್ನೂ ರಾಜಕೀಯ ಕನ್ನಡಕದಿಂದ ನೋಡಬೇಡಿ. ಅಭಿವೃದ್ದಿ ವಿಚಾರ ಬಂದಾಗ ಸಾಧ್ಯವಾದಲ್ಲಿ ಸಹಕಾರ ನೀಡಿ. ಇಲ್ಲವಾದಲ್ಲಿ ತೆಪ್ಪಗಿರಿ. ಬೈಲೂರು ಪರಶುರಾಮ ಪ್ರತಿಮೆ ಕುರಿತು ವಿವಾದ ಎಬ್ಬಿಸುವ ಪ್ರಯತ್ನ ನಡೆಸಬೇಡಿ. ಟೀಕೆ ಮಾಡುವ ಮೊದಲು ಸಮಾಜಕ್ಕೆ ನಿಮ್ಮ ಕೊಡುಗೆ ಏನು ? ಎಂಬುವುದನ್ನ ಪರಾಮರ್ಶೆ ನಡೆಸಿ ಎಂದು ಶಿವಾಯ ಗೆಳೆಯರ ಬಳಗ ಪ್ರಶ್ನಿಸಿದೆ.
ಬೈಲೂರು ಚಿತ್ರಣವೇ ಬದಲಾಗಿದೆ
ಬೈಲೂರಿಗೆ ಈ ಹಿಂದಿನಿಂದಲೂ ತನ್ನದೇ ಆದ ಹಿರಿಮೆ -ಗರಿಮೆಯಿದೆ. ಪರಶುರಾಮ ಥೀಮ್ ಪಾರ್ಕ್ ನಿರ್ಮಾಣವಾದ ಬಳಿಕ ಪ್ರವಾಸೋದ್ಯಮ, ಧಾರ್ಮಿಕ ಕ್ಷೇತ್ರವಾಗಿ ಜಗದ್ವಿಖ್ಯಾತವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗಾಗಮಿಸುತ್ತಾರೆ. ಬೈಲೂರಿನ ಪರಿಸರದ ಮೌಲ್ಯ ವೃದ್ಧಿಸಿದೆ. ಒಂದಷ್ಟು ಮಂದಿಗೆ ಉದ್ಯೋಗ ದೊರೆತಿದೆ. ಹೀಗಾಗಿ ಬೈಲೂರು ಬಗೆಗೆ ಅಪಪ್ರಚಾರ ನಡೆಸಿ ಕ್ಷೇತ್ರಕ್ಕೆ ಅಪಚಾರ ಮಾಡಬೇಡಿ ಎಂದು ಶಿವಾಯ ಗೆಳೆಯರ ಬಳಗ ಪ್ರಕಟನೆಯಲ್ಲಿ ತಿಳಿಸಿದೆ.