ನಾಡಿಗೆ ಬಂದ ಚಿರತೆ – ಆತಂಕದಲ್ಲಿ ಜನತೆ
ಕಾರ್ಕಳ : ಸಾಣೂರು ಗ್ರಾಮ ಮುದ್ದಣ ನಗರ ಶಾಲಾ ಬಳಿ ಚಿರತೆಗಳೆರಡು ಕಾಳಗ ನಡೆಸಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುದ್ದಣನಗರ ಲಾರೆನ್ಸ್ ಅವರ ತೋಟಕ್ಕೆ ಅಳವಡಿಸಿರುವ ಸಿಸಿಟಿಟಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ. ಸಾಣೂರು ಪರಿಸರದಲ್ಲಿ ಆಗಿಂದಾಗ್ಗೆ ಚಿರತೆ ಕಂಡುಬರುತ್ತಿದ್ದು, ಗುರುವಾರ ರಾತ್ರಿ ಮುದ್ದಣನಗರ ಪ್ರಾಥಮಿಕ ಶಾಲಾ ಬಳಿಯಲ್ಲಿ ಪತ್ತೆಯಾಗಿದೆ. ಜಾನುವಾರು, ನಾಯಿಗಳ ಬೇಟೆಗಾಗಿ ಚಿರತೆಗಳು ಕಾಡಿನಿಂದ ನಾಡಿನತ್ತ ದಾಂಗುಡಿಯಿಡುತ್ತಿದ್ದು ಇದರಿಂದ ಜನತೆ ಆತಂಕಿತರಾಗಿದ್ದಾರೆ. ಹೊರಗಡೆ ಸಂಚರಿಸಲು ಜನತೆ ಭಯಪಡುವಂತಾಗಿದೆ.
ಕಾರ್ಕಳ ತಾಲೂಕಿನ ಕಾಂತಾವರ, ಪಳ್ಳಿ, ನೀರೆ ಬೈಲೂರು, ಬೆಳ್ಮಣ್, ಮುಡಾರು, ಕಣಜಾರು, ಮುಂಡ್ಲಿ, ಹೆಬ್ರಿ ತಾಲೂಕಿನ ವರಂಗ, ಮುನಿಯಾಲು, ಅಂಡಾರು ಪರಿಸರದಲ್ಲಿ ಆಗೊಮ್ಮೆ ಈಗೊಮ್ಮೆ ಚಿರತೆಗಳು ಕಾಣಸಿಗುವುದು ಸಾಮಾನ್ಯವಾಗಿದೆ. ಕಳೆದ ವರ್ಷ ಕೆರ್ವಾಶೆ ಶೆಟ್ಟಿಬೆಟ್ಟು ಪರಿಸರದಲ್ಲಿ ಜಾನುವಾರೊಂದನ್ನು ಚಿರತೆ ಬಲಿ ಪಡೆದಿದೆ. ಮಾರ್ಚ್‌ನಲ್ಲಿ ನೀರೆ ಗ್ರಾ. ಪಂ. ನ ಬಾರೆಜಡ್ಡು ಎಂಬಲ್ಲಿ ಚಿರತೆ ದಾಳಿಗೆ ದನವೊಂದು ಬಲಿಯಾಗಿದೆ. ಜನವರಿಯಲ್ಲಿ ಕಣಜಾರು ಪರಿಸರದಲ್ಲಿ ಓಡಾಡುತ್ತಿದ್ದ ಚಿರತೆಯನ್ನು ಬೋನು ಇರಿಸಿ ಹಿಡಿಯುವಲ್ಲಿ ಕಾರ್ಕಳ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದರು. ಇದೀಗ ಸಾಣೂರು ಗ್ರಾಮಸ್ಥರೂ ಚಿರತೆ ಹಾವಳಿಯಿಂದ ನಮ್ಮನ್ನು ರಕ್ಷಿಸುವಂತೆ ಸಂಬಂಧಪಟ್ಟವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಚಿರತೆಯ ಶಬ್ದ ಕೇಳಿಬಂದಿತ್ತು. ಹೀಗಾಗಿ ನಾವು ಸಿಸಿಟಿವಿ ಫೂಟೇಜ್ ಪರಿಶೀಲನೆ ಮಾಡಿದಾಗ ಚಿರತೆಗಳು ಕಾದಾಟ ನಡೆಸಿರುವ ದೃಶ್ಯ ಸೆರೆ ಗೋಚರಿಸಿದೆ. ನಾಯಿಗಳ, ಜಾನುವಾರುಗಳ ಭೇಟೆಗಾಗಿ ಪದೇಪದೆ ಚಿರತೆಗಳು ಕಾಡಿನಿಂದ ನಾಡಿನತ್ತ ಬರುತ್ತಿದೆ. ಮಕ್ಕಳು ಓಡಾಡುವ ಪರಿಸರದಲ್ಲಿ ಚಿರತೆ ಹಾವಳಿ ಅಧಿಕವಾಗಿರುವುದರಿಂದ ಸಂಬಂಧಪಟ್ಟ ಇಲಾಖೆಯವರು ಅಗತ್ಯ ಕ್ರಮವಹಿಸಬೇಕಿದೆ.
–ಲೆನಿಸಾ ಡಿಸೋಜಾ
ಕಳೆದ ಮೂರು ವರ್ಷದಲ್ಲಿ ಸಾಣೂರು ಪರಿಸರದಲ್ಲೇ ಸುಮಾರು 30ಕ್ಕೂ ಅಧಿಕ ನಾಯಿಗಳನ್ನು ಚಿರತೆಗಳು ಕೊಂಡುಹೋಗಿದೆ. ಮುದ್ದಣನಗರ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರದ ಪರಿಸರದಲ್ಲಿ ಚಿರತೆಗಳು ಕಾಣಸಿಗುತ್ತಿರುವುದರಿಂದ ಪೋಷಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯವರು ಚಿರತೆಗಳನ್ನು ಹಿಡಿದು ಸ್ಥಳೀಯರ ಆತಂಕವನ್ನು ದೂರು ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ.
-ಪ್ರಭಾಕರ್ ಮುದ್ದಣನಗರ