ಉಚಿತ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ
ಕಾರ್ಕಳ : ಮುನಿಯಾಲು ಲಯನ್ಸ್ ಕ್ಲಬ್ ವತಿಯಿಂದ ಶಿಥಿಲಾವಸ್ಥೆಯಲ್ಲಿದ್ದ ಕಾಡುಹೊಳೆಯ ಅಂಗನವಾಡಿ ಕಟ್ಟಡದ ದುರಸ್ಥಿ ಕಾರ್ಯ ಹಾಗೂ ಮರ್ಣೆ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಮಹಿಳೆಯರಿಗಾಗಿ ಸ್ಥಾಪಿಸಿದ ಉಚಿತ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಸೆ. 1 ರಂದು ಜರುಗಿತು.
ಲಯನ್ಸ್ ಕ್ಲಬ್‌ನ ವಲಯಾಧ್ಯಕ್ಷ ತೋಮಸ್ ಲುಕಾಸ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಗ್ರಾಮದ ಪ್ರಗತಿಯಲ್ಲಿ ಆಡಳಿತ ವ್ಯವಸ್ಥೆಯೊಂದಿಗೆ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದುದು. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಸ್ಥಾಪಿತವಾದ ಉಚಿತ ಹೊಲಿಗೆ ತರಬೇತಿ ಕೇಂದ್ರದ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಲಿ ಎಂದರು.
ಇದೇ ಸಂದರ್ಭ ಕ್ಲಬ್ ವತಿಯಿಂದ ಐದು ಜನರಿಗೆ ಆಹಾರ ಕಿಟ್ ವಿತರಿಸಲಾಯಿತು. ಮರ್ಣೆ ಪಂಚಾಯತ್ ಸದಸ್ಯರಾದ ಕೃಷ್ಣಮೂರ್ತಿ, ವಿಜಯ ನಾಯ್ಕ, ರಜನಿ ನಾಯ್ಕ, ಹೊಲಿಗೆ ತರಬೇತುದಾರೆ ಸುಲೋಚನ ನಾಯ್ಕ, ಅಂಗನವಾಡಿ ಶಿಕ್ಷಕಿ ಹಾಗೂ ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು. ವಿಜಯಶ್ರೀ ಪ್ರಾರ್ಥಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಕೆ. ಮಂಜುನಾಥ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಗೋಪಿನಾಥ್ ಭಟ್,ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ಅಶೋಕ್ ಶೆಟ್ಟಿ ವಂದಿಸಿದರು.