ಚಿಲ್ಲರೆ ವ್ಯಕ್ತಿಗಳಿಂದ ಕಾರ್ಕಳಕ್ಕೆ ಕಳಂಕ ತರುವ ಯತ್ನ : ಮಹಾವೀರ ಹೆಗ್ಡೆ ಆರೋಪ

ಹತಾಶೆಯಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಪಪ್ರಚಾರ

ಕಾರ್ಕಳ : ವಿಶ್ವವೇ ಕಾರ್ಕಳದ ಕಡೆ ತಿರುಗಿ ನೋಡುವ ರೀತಿಯಲ್ಲಿ ಅಭಿವೃದ್ಧಿ ಹಾಗೂ ಕೀರ್ತಿ ತರುವ ಕೆಲಸಗಳು ಈ ಕ್ಷೇತ್ರದಲ್ಲಿ ನಡೆದಿವೆ. ಆದರೆ ಕಾರ್ಕಳದ ಅಭಿವೃದ್ಧಿ ಮತ್ತು ಕೀರ್ತಿ ಸಹಿಸದ ಕೆಲ ಸ್ಥಾಪಿತ ಹಿತಾಸಕ್ತಿಗಳು ನಿರಂತರ ದೂಷಣೆಯನ್ನೇ ನಿತ್ಯದ ಕಾಯಕವನ್ನಾಗಿಸಿಕೊಂಡು ಅಪಪ್ರಚಾರ, ಟೀಕೆಗಳ ಮೂಲಕ ಕಾರ್ಕಳಕ್ಕೆ ಕಳಂಕ, ಅಗೌರವ ಮತ್ತು ಅಭಿವೃದ್ಧಿಗೆ ಚ್ಯುತಿ ತರುವ ಕೆಲಸ ಮಾಡುತ್ತಿವೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಲ್ಲರೆ ಗಿರಾಕಿಗಳು
ಕಾರ್ಕಳದ ಬಗ್ಗೆ ಕೆಲವರು ಮಾಡುವ ಟೀಕೆಗಳು ದುರುದ್ದೇಶಪೂರ್ವಕವಾಗಿವೆ. ಅಪಪ್ರಚಾರವನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲವರು ಒಂದು ಸುಳ್ಳನ್ನು ನೂರಾರು ಬಾರಿ ಪುನರುಚ್ಚರಿಸಿ ಸತ್ಯವನ್ನಾಗಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಬರುವಂತೆ ಮಾಡಿ ಅಪಪ್ರಚಾರ ಮಾಡುವುದನ್ನೆ ನಿತ್ಯದ ರೂಢಿಯನ್ನಾಗಿಸಿಕೊಂಡಿದ್ದಾರೆ. ಕಾರ್ಕಳದ ಸಮಗ್ರ ಅಭಿವೃದ್ಧಿ ಸಹಿಸದೆ ಅಪಪ್ರಚಾರ ಮಾಡುತ್ತಿರುವವರು ಇವರು ಯಾರೂ ಸಾಮಾಜಿಕ, ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಲ್ಲ. ಇವರೆಲ್ಲ ಟೀಕೆಯಲ್ಲೆ ದಿನದೂಡುವ ಚಿಲ್ಲರೆ ಗಿರಾಕಿಗಳಾಗಿದ್ದಾರೆ ಅವರು ಲೇವಡಿ ಮಾಡಿದ್ದಾರೆ.

ಕಳಂಕ ತರುವ ಚಿಂತನೆ
ಎಣ್ಣೆಹೊಳೆ ನೀರಾವರಿ ಯೋಜನೆ, ತಾಲೂಕು ಸರಕಾರಿ ಆಸ್ಪತ್ರೆ ಆಧುನೀಕರಣ, ಪರಶುರಾಮ ಥೀಂ ಪಾರ್ಕ್ ನಿರ್ಮಾಣ, ಶ್ರೀ ಮಾರಿಯಮ್ಮ ದೇಗುಲ, ಕೈಗಾರಿಕೆ ಮೂಲಕ ಉದ್ಯೋಗ ಸೃಷ್ಟಿ, ಕಾರ್ಕಳ ಉತ್ಸವ ಹೀಗೆ ಅನೇಕ ದೂರದೃಷ್ಟಿಯ ಸಾರ್ವಜನಿಕ ಕಾರ್ಯಕ್ರಮಗಳು ಜನಪರವಾಗಿಯೇ ಆಗಿರುವಂಥದ್ದು, ಜನರ ಬದುಕು ಕಟ್ಟುವ ಆರ್ಥಿಕ ಸ್ವಾವಲಂಬನೆಗೆ ಪೂರಕವಾದ ಅಂಶಗಳಿವು. ಇವುಗಳ ಅಗತ್ಯದ ಬಗ್ಗೆ ಪ್ರಶ್ನಿಸುತ್ತ ಸಾರ್ವಜನಿಕ ವಲಯದಲ್ಲಿ ತಪ್ಪು ಕಲ್ಪನೆ ಬಿತ್ತುವ ಪಿತೂರಿಯ ಹಿಂದೆ ಕಾರ್ಕಳಕ್ಕೆ ಕಳಂಕ ತರುವ ಚಿಂತನೆಗಳಿರುವುದು ಗೋಚರಿಸುತ್ತಿದೆ ಎಂದಿದ್ದಾರೆ.

ಸಾರ್ವಜನಿಕರು ಎಚ್ಚರಿಕೆಯಿಂದಿರಿ
ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ದಣಿವರಿಯದ ಅಭಿವೃದ್ಧಿಯ ಕಾಯಕ ಯೋಗಿ. ಕಾರ್ಕಳ ಕ್ಷೇತ್ರದ ಸಮಗ್ರ ಕಲ್ಯಾಣಕ್ಕಾಗಿ ಹತ್ತಾರು ಯೋಜನೆಗಳನ್ನು ತಂದು ಶ್ರಮಿಸಿದ್ದಾರೆ. ದೂರದೃಷ್ಟಿಯ ಯೋಜನೆಯನ್ನು ಅವರು ಕಾರ್ಯಗತಗೊಳಿಸಿದ್ದಾರೆ. ಅದನ್ನು ಸಹಿಸದೆ ಉದ್ದೇಶಪೂರ್ವಕವಾಗಿ ಈ ರೀತಿ ಅಪಪ್ರಚಾರಕ್ಕೆ ಮೊರೆ ಹೋಗುತ್ತಿರುವುದರ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿರುವ ಅವರು ಇದರ ಎಲ್ಲದರ ಪರಿಣಾಮ ಕಾರ್ಕಳದ ಕೀರ್ತಿ ಮತ್ತು ಅಭಿವೃದ್ಧಿಗೆ ಹಿನ್ನಡೆ ತರುವುದಾಗಿದೆ. ಈ ರೀತಿ ಕ್ಷೇತ್ರಕ್ಕೆ ಕುಂದು ತರುವ ಕೆಲಸವನ್ನು ಯಾರೂ ಮಾಡಬಾರದು. ಅಲ್ಲದೆ ಈ ರೀತಿ ಸತ್ಯಾಸತ್ಯತೆ ಅರಿತು ನಡೆದುಕೊಳ್ಳದ ವಿಕೃತ ಮನಸ್ಸುಗಳ ವರ್ತನೆ ಮತ್ತು ಅವರ ಹೇಳಿಕೆಗಳ ಕುರಿತು ಸಾರ್ವಜನಿಕರು ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.
ಒಬ್ಬ ಉತ್ತಮ ಕೆಲಸಗಾರನನ್ನು ಸೋಲಿಸಲಾಗದೆ, ವೇಗವನ್ನು ತಡೆಯಲಾಗದೆ ಹತಾಶೆಗೆ ಒಳಗಾಗಿ ಇಂತಹ ಚಟುವಟಿಕೆಗಳನ್ನು ಮಾಡುತ್ತಿರುವವರು ಇನ್ನಾದರೂ ಇಂತಹ ಕುಕೃತ್ಯಗಳನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಅವರು ಹೇಳಿದ್ದಾರೆ.































































































































































error: Content is protected !!
Scroll to Top