ಅಪೂರ್ವ ಪರಿಸರ ಪ್ರೇಮಿ ಅಫ್ರಾನ್‌ : ಹಾವು ಹಿಡಿಯುವಲ್ಲೂ ಸೈ ಈ ಬಾಲಕ

ಕಾರ್ಕಳ : ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಎಳವೆಯಿಂದಲೇ ಪ್ರಕೃತಿಯೊಂದಿಗೆ ಬೆರೆತು ಪರಿಸರ ಪ್ರೇಮಿಯಾಗಿ ಬೆಳೆದವರು ಪರ್ವೆಜ್ ಅಫ್ರಾನ್.‌ ಬಾಲ್ಯದಿಂದಲೇ ಪರಿಸರದೊಂದಿಗಿನ ಇವರ ಒಡನಾಟ ಮೆಚ್ಚುವಂತದ್ದೆ. ಸಾಣೂರು ಮುರತ್ತಂಗಡಿ ನಿವಾಸಿ ಅಬೂಬಕ್ಕರ್‌ ಮತ್ತು ಅಸ್ಮಾ ದಂಪತಿ ಪುತ್ರನೇ ಈ ಅಫ್ರಾನ್‌.

2 ವರ್ಷದಲ್ಲೇ ಈಜು ಕರಗತ
ಅಫ್ರಾನ್‌ ಪುಟ್ಟ ಮಗುವಾಗಿದ್ದಾಗಲೇ ಕಾರ್ಕಳ ಪುಲ್ಕೇರಿ ಮಠದ ಕೆರೆಯಲ್ಲಿ ಈಜಾಡುತ್ತಿದ್ದ. ಅಫ್ರಾನ್‌ಗೆ ಎರಡು ವರ್ಷ ತುಂಬುತ್ತಿದ್ದಂತೆ ತಂದೆ ಅಬೂಬಕ್ಕರ್‌ ಪೋರವನ್ನು ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಗೆ ಮಠದ ಕೆರೆಗೆ ಕರೆದುಕೊಂಡು ಬಂದು ಈಜು ಅಭ್ಯಾಸ ಮಾಡಿಸುತ್ತಿದ್ದರು. 2 ವರ್ಷ ಪ್ರಾಯದಲ್ಲಿ ಯಾವುದೇ ಭಯವಿಲ್ಲದೆ ಪುಟ್ಟ ಪೋರ ಆಚೆಯಿಂದ ಈಚೆ, ಈಚೆಯಿಂದ ಆಚೆ ನೀರಿನಲ್ಲಿ ಲೀಲಾಜಾಲವಾಗಿ ಈಜುತ್ತಿದ್ದ. ಈತನ ಈಜು ಕಂಡು ನೋಡುಗರು ಮೂಕವಿಸ್ಮತರಾಗುತ್ತಿದ್ದರು.

ಶಿಕ್ಷಣ
ಕಾರ್ಕಳ ಕ್ರೈಸ್ಟ್‌ ಕಿಂಗ್‌ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿರುವ ಈತ, ಸಾಣೂರಿನಲ್ಲಿ ಪ್ರೌಢ ಮತ್ತು ಪಿಯುಸಿ ಶಿಕ್ಷಣವನ್ನು ಪಡೆದಿರುತ್ತಾರೆ. ಪ್ರಸ್ತುತ ವೈಲ್ಡ್‌ ಲೈಫ್‌ ಸಂಬಂಧಿತ ಕೋರ್ಸ್ ಮಾಡುವ ಆಲೋಚನೆಯಲ್ಲಿದ್ದಾರೆ.

ಕರಾಟೆ – ಟೆಕ್ವಾಂಡೋ ಪ್ರತಿಭೆ
ಕರಾಟೆ ಟೆಕ್ವಾಂಡೊದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಅಫ್ರಾನ್‌ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, ರಾಷ್ಟ್ರಮಟ್ಟಕ್ಕೂ ಆಯ್ಕೆಯಾಗಿದ್ದರು. ಈಗಲೂ ಇದನ್ನು ಮುಂದುವರೆಸುತ್ತಿದ್ದಾರೆ.

ಉರಗ ಪ್ರೇಮಿ
ತನ್ನ ತಂದೆ ತಾಯಿಯಂತೆ ಬಾಲ್ಯದಲ್ಲೇ ಪ್ರಕೃತಿಯ ಮೇಲೆ ಅಪಾರ ಪ್ರೀತಿ, ಮಮತೆ ಹೊಂದಿರುವ ಅಫ್ರಾನ್‌ ಓರ್ವ ಉರಗ ಪ್ರೇಮಿ. ತಂದೆಯ ಮಾರ್ಗದರ್ಶನದೊಂದಿಗೆ ಹಾವುಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಈತ 9 ನೇ ತರಗತಿಯಲ್ಲಿರುವಾಗ ವಿಷದ ಹಾವುಗಳನ್ನು ಹಿಡಿಯಲು ಪ್ರಾರಂಭಿಸಿದ್ದ. ಆರಂಭದಲ್ಲಿ ಒಂದು ಬಾರಿ ಹೆಬ್ಬಾವು ಕಚ್ಚಿದ್ದ ಸಂದರ್ಭ ಚಿಕಿತ್ಸೆ ನೀಡಿದ್ದ ಪುತ್ತೂರಿನ ಉರಗತಜ್ಞ ಡಾ. ರವೀಂದ್ರ ನಾಥ್‌ ಐಕಳ ಅವರಿಂದ ವಿಷಕಾರಿ ಹಾವುಗಳ ಬಗ್ಗೆ ಮಾಹಿತಿ ಪಡೆದಿದ್ದ. ಪ್ರಸ್ತುತ ನಾಗರ ಹಾವು ಸೇರಿದಂತೆ ಎಲ್ಲ ರೀತಿಯ ಹಾವುಗಳನ್ನು ಬಹಳ ಸುಲಭವಾಗಿ ಹಿಡಿಯುವ ಚಾಕಚಕ್ಯತೆಯನ್ನು ಅಫ್ರಾನ್‌ ಬೆಳೆಸಿಕೊಂಡಿದ್ದಾನೆ.

ಅಬೂಬಕ್ಕರ್‌ ಅವರು ಓರ್ವ ಸಾವಯವ ಕೃಷಿಕ. ಅಸ್ಮಾ ಶಿಕ್ಷಕಿ. ಹಡಿಲು ಬಿದ್ದಿರುವ ಭೂಮಿಯಲ್ಲಿ ಸಾಗುವಳಿ ಮಾಡುವ ಹವ್ಯಾಸ ಹೊಂದಿರುವ ಇವರು ನೂರಾರು ಬಗೆಯ ಭತ್ತದ ತಳಿಯನ್ನು ಬೆಳೆಸುತ್ತಾರೆ. ಭತ್ತ ಮಾತ್ರವಲ್ಲದೆ ತರಕಾರಿಗಳ ಬೆಳೆಯಲ್ಲೂ ಇವರು ಎತ್ತಿದ ಕೈ. ಇನ್ನು ತಮ್ಮ ಮನೆಯಲ್ಲಿ ಹಿರಿಯರು ಬಳಸುತ್ತಿದ್ದ ಮಣ್ಣಿನ ಪಾತ್ರೆಗಳು, ಕೃಷಿ ಪರಿಕರಗಳು, ಮನೆ ಬಳಕೆ ವಸ್ತುಗಳನ್ನು ಸಂಗ್ರಹಿಸಿದ್ದು ಒಂದು ರೀತಿಯಲ್ಲಿ ಮ್ಯೂಸಿಯಂನಂತಿದೆ. ಇವರ ಈ ಕೃಷಿ ಪ್ರೇಮ, ಪ್ರಕೃತಿಯ ಮೇಲಿನ ಒಲವು ಮಗ ಅಫ್ರಾನ್‌ನ ಪರಿಸರ ಪ್ರೇಮಕ್ಕೆ ಪ್ರೇರಣೆ ಎಂದರೆ ಅತಿಶಯೋಕ್ತಿಯಲ್ಲ.

ಪ್ರಕೃತಿಗಾಗಿ ನಮ್ಮಿಂದ ಏನು ಒಳಿತನ್ನು ಮಾಡಲು ಸಾಧ್ಯವೋ ಅದನ್ನು ಮಾಡಬೇಕು. ತನ್ಮೂಲಕ ಬದುಕಿನಲ್ಲಿ ನವೀನತೆಯನ್ನು ಕಂಡುಕೊಳ್ಳಬೇಕು. ಬಾಲ್ಯದಲ್ಲೇ ಅವನ ನಡವಳಿಕೆ, ಅಭಿರುಚಿಗಳಿಂದಾಗಿ ಅವನ ಒಲವು ಪರಿಸರದತ್ತ ಎಂಬುದು ನಮಗೆ ಅರಿವಾಗಿತ್ತು.
ಅಸ್ಮಾ , ಅಫ್ರಾನ್‌ ತಾಯಿ

ವರದಿ : ನಳಿನಿ ಎಸ್.‌ ಸುವರ್ಣ



































































































































































error: Content is protected !!
Scroll to Top