ಸುಳ್ಳು ಮಾನ ಹಾನಿಕರ ಹೇಳಿಕೆ ನೀಡಿದ ಶುಭದ ರಾವ್‌ ವಿರುದ್ಧ ಕಾನೂನು ಕ್ರಮ – ರವೀಂದ್ರ ಮೊಯ್ಲಿ

ಆರೋಪದಲ್ಲಿ ಸ್ಪಷ್ಟತೆಯಿಲ್ಲ – ಹಿಟ್‌ ಆ್ಯಂಡ್ ರನ್‌ ಪಾಲಿಸಿ

ಕಾರ್ಕಳ : ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷ, ರಾಜಕೀಯ ನಾಯಕರುಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಟೀಕೆ, ಆರೋಪ ಸರ್ವೇಸಾಮಾನ್ಯ. ಆದರೆ, ಆ ಆರೋಪ ಟೀಕೆಗಳು ಸತ್ಯವಾಗಿರಬೇಕು ಅಥವಾ ಕನಿಷ್ಠ ಪಕ್ಷ ಸತ್ಯಕ್ಕೆ ಹತ್ತಿರವಾಗಿರಬೇಕು ಎಂದು ನಗರ ಬಿಜೆಪಿ ಅಧ್ಯಕ್ಷ ರವೀಂದ್ರ ಮೊಯ್ಲಿ ತಿಳಿಸಿದರು. ಅವರು ಬುಧವಾರ ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ, ಮಾತನಾಡಿದರು.
ಜೂ. 5ರಂದು ಕಾರ್ಕಳ ಕಾಂಗ್ರೆಸ್ ವಕ್ತಾರ, ಪುರಸಭಾ ಸದಸ್ಯ ಶುಭದ ರಾವ್ ಪತ್ರಿಕಾಗೋಷ್ಠಿಯಲ್ಲಿ ಕಾರ್ಕಳದ ಪ್ರತಿಷ್ಠಿತ ಸಂಸ್ಥೆಯ ಕಟ್ಟಡ ತೆರಿಗೆ ನಿಗದಿ ಹೆಸರಿನಲ್ಲಿ ಬಿಜೆಪಿ ಸದಸ್ಯರು ಲಕ್ಷಾಂತರ ರೂ. ಪಡೆದಿರುತ್ತಾರೆ ಎಂದು ಆರೋಪಿಸಿರುತ್ತಾರೆ. ಈ ಆರೋಪವನ್ನು ಅವರು ಸಾಬೀತುಪಡಿಸಬೇಕು ಅಥವಾ ಕಾನೂನು ಕ್ರಮಕ್ಕೆ ಒಳಗಾಗಬೇಕು. ಈವರೆಗೆ ಸಂಬಂಧಪಟ್ಟ ಸಂಸ್ಥೆಯವರು ಯಾವುದೇ ದೂರು ಅಥವಾ ಆರೋಪ ಮಾಡಿರುವುದಿಲ್ಲ. ರಾಜಕೀಯ ಕಾರಣಕ್ಕಾಗಿ ಹಾಗೂ ಪ್ರಚಾರದ ತೆವಲಿನಿಂದ ಶುಭದ ರಾವ್ ಈ ರೀತಿಯ ಸುಳ್ಳು ಆರೋಪ ಹೊರಿಸುತ್ತಿದ್ದಾರೆ.

ಸ್ಪಷ್ಟಪಡಿಸಲಿ
ಶುಭದ ರಾವ್‌ ಮಾಡಿರುವ ಆರೋಪದಲ್ಲಿ ಸತ್ಯಾಂಶ ಬಿಡಿ ಸ್ಪಷ್ಟತೆಯೂ ಇಲ್ಲ. ಯಾವ ಸಂಸ್ಥೆ ? ಯಾವ ಪುರಸಭಾ ಸದಸ್ಯ ? ಯಾರು ಹಣ ಪಾವತಿ ಮಾಡಿರುತ್ತಾರೆ ? ಯಾರಿಗೆ ಮಾಡಿರುತ್ತಾರೆ ? ಎನ್ನುವ ಬಗ್ಗೆ ಸ್ಪಷ್ಟನೆ ನೀಡಲಿ. ನೀವು ಈ ಬಗ್ಗೆ ಪುರಸಭಾ ಆಡಳಿತಾಧಿಕಾರಿಯವರಿಗಾಗಲಿ, ಜಿಲ್ಲಾಧಿಕಾರಿಯವರಿಗಾಗಲಿ ಅಥವಾ ಲೋಕಾಯುಕ್ತರಿಗಾಗಲಿ ಯಾವುದೇ ದೂರು ಅರ್ಜಿ ಸಲ್ಲಿಸದೆ ಇರಲು ಕಾರಣವೇನು ? ಎಂದು ಮೊಯ್ಲಿ ಪ್ರಶ್ನಿಸಿದರು.

ಹಿಟ್‌ ಆ್ಯಂಡ್ ರನ್‌ ಪಾಲಿಸಿ
ಶುಭದ ರಾವ್ ಅವರು ಈ ಹಿಂದೆ ಕೂಡ ಹಲವಾರು ಬಾರಿ ನಮ್ಮ ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದು ಅದರಲ್ಲಿ ಯಾವುದು ಕೂಡ ತಾರ್ಕಿಕ ಅಂತ್ಯ ಕಂಡದಿಲ್ಲ. ಅವರದ್ದು ಹಿಟ್‌ ಆ್ಯಂಡ್ ರನ್‌ ಪಾಲಿಸಿ. ಪ್ರಸ್ತುತ ಕಾರ್ಕಳ ಪುರಸಭೆಯಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಹೆಚ್ಚು ಮಹಿಳೆಯರು ಚುನಾಯಿತರಾಗಿದ್ದು, ಅವರನ್ನೊಳಗೊಂಡಂತೆ ಬಿಜೆಪಿಯ ಎಲ್ಲ 11 ಮಂದಿ ಪುರಸಭಾ ಸದಸ್ಯರ ಮೇಲೆ ಹೊರಿಸಿರುವ ಆರೋಪವು ಮಾನ ಹಾನಿಕರವಾದುದು. ಬಿಜೆಪಿ ಸದಸ್ಯರ ತೇಜೋವಧೆ ಮಾಡುವ ಕಾರ್ಯವಿದು. ಹೀಗಾಗಿ ನ್ಯಾಯಾಲಯದಲ್ಲಿ ಸೂಕ್ತ ಮೊಕದ್ದಮೆ ಹೂಡಲಾಗುವುದು. ಅವರ ಈ ಹೇಳಿಕೆ ಹಿಂಬಾಗಿಲಿನಿಂದ ಪುರಸಭೆಯ ಆಡಳಿತ ಪಡೆಯುವ ಉದ್ದೇಶದ ಒಂದು ಭಾಗ ಎಂದು ಮೊಯ್ಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಮಾಜಿ ಅಧ್ಯಕ್ಷ ನಿತ್ಯಾನಂದ ಪೈ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿರಂಜನ್ ಜೈನ್, ಉಪಾಧ್ಯಕ್ಷ ಯೋಗೀಶ್ ನಾಯಕ್ ಪತ್ರಿಕಾಗೋಷ್ಠಿಯಲ್ಲಿದ್ದರು.error: Content is protected !!
Scroll to Top