ದಕ್ಷಿಣ ಕನ್ನಡದಲ್ಲಿ 240, ಉಡುಪಿಯಲ್ಲಿ 200 ಹುದ್ದೆ ಖಾಲಿ
ಬೆಂಗಳೂರು : ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 4,055 ಅತಿಥಿ ಉಪನ್ಯಾಸಕರ ಹುದ್ದೆಗಳಿಗೆನೇಮಕಾತಿ ಮಾಡಿಕೊಳ್ಳಲು ಸರಕಾರ ಆದೇಶ ಹೊರಡಿಸಿದೆ.
2023-24ನೇ ಸಾಲಿನಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ಜತೆಗೆ ಭಡ್ತಿ, ವಯೋನಿವೃತ್ತಿ, ನಿಧನ ಹಾಗೂ ಇತರ ಕಾರಣಗಳಿಂದ ತೆರವಾಗಲಿರುವ ಉಪನ್ಯಾಸಕರ ಹುದ್ದೆಗಳ ಹಾಗೂ ಹೊಸ ಸಂಯೋಜನೆಗಳಿಗೆ ಹುದ್ದೆ ಮಂಜೂರಾಗದ ವಿಷಯಗಳಿಗೆ ನೇಮಕ ಮಾಡಿಕೊಳ್ಳಬೇಕಾದ ಉಪನ್ಯಾಸಕರನ್ನು ಸೇರಿಸಿ ಒಟ್ಟು 4,055 ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರಕಾರ ಹಸುರು ನಿಶಾನೆ ತೋರಿದೆ.
ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ. 55ರಷ್ಟು ಅಂಕ ಪಡೆದ ಅಭ್ಯರ್ಥಿಗಳನ್ನು ಮಾತ್ರ ಅತಿಥಿ ಉಪನ್ಯಾಸಕರ ಹುದ್ದೆಗೆ ಪರಿಗಣಿಸುವಂತೆ ಸರಕಾರ ಸೂಚಿಸಿದೆ. ಇವರಿಗೆ ಮಾಸಿಕ 12 ಸಾವಿರ ರೂ. ಗೌರವಧನ ನಿಗದಿಪಡಿಸಿದ್ದು, ವಾರಕ್ಕೆ 10 ತಾಸು ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಖಾಯಂ ಉಪನ್ಯಾಸಕರ ನೇಮಕಾತಿ ಬೆನ್ನಲ್ಲೇ ಅತಿಥಿ ಉಪನ್ಯಾಸಕರ ಹುದ್ದೆಗಳು ರದ್ದಾಗುತ್ತವೆ. ಆಯಾ ಜಿಲ್ಲೆಯ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕಡಿಮೆ ಕಾರ್ಯಭಾರ ಹೊಂದಿರುವ ವಿಷಯಗಳ ಉಪನ್ಯಾಸಕರನ್ನು ಜಿಲ್ಲೆಯ ಇತರ ಸರಕಾರಿ ಪ.ಪೂ. ಕಾಲೇಜುಗಳಲ್ಲಿ ಖಾಲಿ ಹುದ್ದೆಗಳಿಗೆ ನಿಯೋಜಿಸಿದ ಅನಂತರ ಉಳಿಕೆ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಲು ಒಬ್ಬರಿಗಿಂತ ಹೆಚ್ಚು ಮಂದಿ ಬಂದಲ್ಲಿ ಆ ಪೈಕಿ ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚು ಅಂಕ ಪಡೆದವರನ್ನು ಪರಿಗಣಿಸುವಂತೆ ಸೂಚಿಸಲಾಗಿದೆ.
ಸರಕಾರಿ ಆದೇಶದ ಪ್ರಕಾರ ದಕ್ಷಿಣ ಕನ್ನಡದಲ್ಲಿ 240, ಉಡುಪಿಯಲ್ಲಿ 200 ಖಾಲಿಯಿರುವ ಅತಿಥಿ ಉಪನ್ಯಾಸಕರ ಃಉದ್ದೆಗಳಿಗೆ ನೇಮಕಾತಿಯಾಗಲಿದೆ.