288 ಮಂದಿ ಸಾವು; 1100 ಪ್ರಯಾಣಿಕರು ಗಾಯಾಳು
ಹೊಸದಿಲ್ಲಿ : ಒಡಿಶಾದ ಬಾಲಸೋರ್ನಲ್ಲಿ 288 ಪ್ರಯಾಖಿಕರ ಜೀವ ಕಸಿದುಕೊಂಡಿರುವ ಮೂರು ರೈಲುಗಳ ನಡುವಿನ ಅಪಘಾತಕ್ಕೆ ಏನು ಕಾರಣ ಹಾಗೂ ಕಾರಣಕರ್ತರು ಯಾರೆಂಬುದನ್ನು ಪತ್ತೆಹಚ್ಚಲಾಗಿದ್ದು, ಶೀಘ್ರವೇ ಮಾಹಿತಿ ನೀಡಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಎರಡು ಪ್ಯಾಸೆಂಜರ್ ರೈಲು ಹಾಗೂ ಗೂಡ್ಸ್ ರೈಲು ನಡುವೆ ಸಂಭವಿಸಿದ ಅಪಘಾತದಲ್ಲಿ 288 ಮಂದಿ ಮೃತಪಟ್ಟಿದ್ದು, 1,100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ನಡೆಸಿ ಈ ಅವಘಡಕ್ಕೆ ಕಾರಣರಾದವರನ್ನು ಗುರುತಿಸಿದ್ದಾರೆ. ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ನಲ್ಲಿರುವ ಬದಲಾವಣೆಯಿಂದ ಇದು ಸಂಭವಿಸಿದೆ ಎಂದು ಸುದ್ದಿಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
ಇದೀಗ ದುರಸ್ತಿ ಕಾರ್ಯದ ಕಡೆಗೆ ಹೆಚ್ಚಿನ ಗಮನಹರಿಸಿದ್ದು, ಜೂನ್ 7ರ ಹೊತ್ತಿಗೆ ಕಾರ್ಯಗಳು ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸ್ಥಳ ಪರಿಶೀಲನೆ ನಡೆಸಿದರು, ಮೃತದೇಹಗಳನ್ನು ಸಾಗಿಸುವ ಕೆಲಸ ಪೂರ್ಣಗೊಂಡಿದೆ. ಬುಧವಾರ ಮರುಸ್ಥಾಪನೆ ಕಾರ್ಯ ಪೂರ್ಣಗೊಳ್ಳಲಿದ್ದು, ರೈಲು ಎಂದಿನಂತೆ ಸಂಚರಿಸಬಹುದು ಎಂದಿದ್ದಾರೆ.
ಶನಿವಾರ ಮಧ್ಯಾಹ್ನದ ವೇಳೆಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಮುಗಿದಿದೆ. ಬಳಿಕ ಅಪಘಾತದ ಕೋಚ್‌ಗಳನ್ನು ತೆಗೆದುಹಾಕಲಾಗಿದ್ದು, ಈಗ ಟ್ರ್ಯಾಕ್‌ಗಳನ್ನು ಹಾಕುವ ಮತ್ತು ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ. 1000ಕ್ಕೂ ಹೆಚ್ಚು ರೈಲ್ವೆ ನೌಕರರು ಈ ಕಾರ್ಯದಲ್ಲಿ ತೊಡಗಿದ್ದಾರೆ.