ಸಿಎಂ ಪಟ್ಟ ಬಿಟ್ಟುಕೊಟ್ಟ ಕಾರಣ ಬಹಿರಂಗಪಡಿಸಿದ ಡಿಕೆಶಿ
ಬೆಂಗಳೂರು : ಹೈಕಮಾಂಡ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತು ಮೀರಲಾರದೆ ತಾನು ಉಪಮುಖ್ಯಮಂತ್ರಿ ಹುದ್ದೆಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು ಎಂಬುದನ್ನು ಡಿ.ಕೆ.ಶಿವಕುಮಾರ್ ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.
ಶನಿವಾರ ಸ್ವಕ್ಷೇತ್ರವಾದ ಕನಕಪುರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುವ ವೇಳೆ ಭಾವುಕರಾದ ಶಿವಕುಮಾರ್, ಹಿರಿಯ ನಾಯಕಿ ಸೋನಿಯಾ ಗಾಂಧಿ ನೀಡಿದ ಸಲಹೆಯನ್ನು ಧಿಕ್ಕರಿಸಲಾಗದೆ ತಾನು ಹೈಕಮಾಂಡ್ ಮಾತಿಗೆ ಒಪ್ಪಿಕೊಂಡಿದ್ದೇನೆ. ನೀವೆಲ್ಲ ನನ್ನನ್ನು ಮುಖ್ಯಮಂತ್ರಿಯಾಗಿ ಕಾಣಲು ಆಶಿಸಿ ಮತ ಹಾಕಿದ್ದೀರಿ. ಆದರೆ ಈ ಸಲ ಅದು ಈಡೇರಿಲ್ಲ, ಹಾಗೆಂದು ನಾನು ನಿರೀಕ್ಷೆ ಕಳೆದುಕೊಂಡಿಲ್ಲ. ನನ್ನ ಸರದಿಗಾಗಿ ಕಾಯುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ನಿಚ್ಚಳ ಬಹುಮತ ಗಳಿಸಿದ ಬಳಿಕ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಭಾರಿ ಹಗ್ಗಜಗ್ಗಾಟ ನಡೆದಿತ್ತು. ಶಾಸಕರ ಬೆಂಬಲ ಸಿದ್ದರಾಮಯ್ಯ ಕಡೆಗಿದ್ದ ಕಾರಣ ಹೈಕಮಾಂಡ್ ಅವರನ್ನು ಮುಖ್ಯಮಂತ್ರಿ ಮಾಡಿ ಡಿಕೆಶಿಗೆ ಉಪಮುಖ್ಯಮಂತ್ರಿ ಸಹಿತ ಪ್ರಭಾವಿ ಖಾತೆ ಹಾಗೂ ಅವರು ಹೇಳಿದ ಆರು ಮಂದಿಯನ್ನು ಮಂತ್ರಿ ಮಾಡುವುದು ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿಯೇ ಮುಂದುವರಿಯುವ ಸಂಧಾನ ಸೂತ್ರ ರೂಪಿಸಿದೆ.ಸಿದ್ದರಾಮಯ್ಯ ಮುಖ್ಯಮಂತ್ರಿ ಅದರೂ ಅವರಷ್ಟೇ ಪ್ರಭಾವಿಯಾಗಿ ಶಿವಕುಮಾರ್ ಸರಕಾರದಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ.
ಹೈಕಮಾಂಡ್ ಇಬ್ಬರ ನಡುವೆ ಅಧಿಕಾರ ಹಂಚಿಕೆ ಸೂತ್ರವನ್ನೂ ರೂಪಿಸಿದೆ ಎನ್ನಲಾಗುತ್ತಿದೆ. ಆದರೆ ಯಾರೂ ಇದನ್ನು ಅಧಿಕೃತವಾಗಿ ಹೇಳಿಲ್ಲ.