ಪ್ರಧಾನಿ ಮೋದಿ ಭೇಟಿಯಾದ ಕಾರ್ಕಳದ ಬೀದಿ ವ್ಯಾಪಾರಿ

ಕಾರ್ಕಳ : ಪಿಎಂ – ಸ್ವನಿಧಿ ಫಲಾನುಭವಿ ಕಾರ್ಕಳದ ಬೀದಿಬದಿ ವ್ಯಾಪಾರಿ ಪ್ರಸಾದ್‌ ಬಿ.ಹೆಚ್.‌ ಅವರು ದೆಹಲಿಯಲ್ಲಿ ಜೂ. 1ರಂದು ನಡೆದ ಪಿಎಂ – ಸ್ವನಿಧಿ ವಾರ್ಷಿಕ ಮಹೋತ್ಸವದಲ್ಲಿ ಭಾಗವಹಿಸಲು ಅವಕಾಶ ಪಡೆದು ಪ್ರಧಾನಿ ಮೋದಿ ಅವರನ್ನು ಭೇಟಿಯಾದರು.

ಬೀದಿ ಬದಿ ವ್ಯಾಪಾರಕ್ಕಾಗಿ ಮೊದಲ ಬಾರಿಗೆ ಪಿಎಂ ಸ್ವನಿಧಿ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕ್‌ನಿಂದ 10 ಸಾವಿರ ರೂ. ಸಾಲ ಪಡೆದ ಪ್ರಸಾದ್‌ ಅದನ್ನು ಅವಧಿಗೆ ಸರಿಯಾಗಿ ಅಂದರೆ 6 ತಿಂಗಳಲ್ಲಿ ಮರುಪಾವತಿ ಮಾಡಿದ್ದರು. ಬಳಿಕ ಯೋಜನೆಯಂತೆ 20 ಸಾವಿರ ರೂ. ಸಾಲ ಪಡೆದು ತನ್ನ ಉದ್ಯಮ ವಿಸ್ತರಿಸಿದ ಪ್ರಸಾದ್‌ ಆ ಮೊತ್ತವನ್ನು ಬಡ್ಡಿಸಹಿತ 1 ವರ್ಷದೊಳಗಡೆ ಮರುಪಾವತಿ ಮಾಡಿದ್ದರು. ಅನಂತರ ಯೋಜನೆಯಂತೆ 50 ಸಾವಿರ ರೂ. ಸಾಲ ಪಡೆದು ಅದರಲ್ಲೂ ನಿಗದಿಗೊಳಿಸಿದಂತೆ ಹಂತ ಹಂತವಾಗಿ ಸಾಲ ಮರುಪಾವತಿಗೊಳಿಸುತ್ತಿದ್ದರು. ನಿಯಮದನ್ವಯ ಸಾಲ ಪಡೆದು ಮರುಪಾವತಿಸಿರುವ ಬೀದಿ ಬದಿ ವ್ಯಾಪಾರಿಗಳನ್ನು ಪಿಎಂ ಸ್ವನಿಧಿ ವಾರ್ಷಿಕ ಮಹೋತ್ಸವಕ್ಕೆ ಆಯ್ಕೆ ಮಾಡಲಾಗಿದ್ದು, ಕಾರ್ಕಳದಿಂದ ಇಬ್ಬರನ್ನುಆಯ್ಕೆಗೊಳಿಸಿ ಅವರ ಹೆಸರನ್ನು ಜಿಲ್ಲೆಗೆ ಕಳುಹಿಸಿಕೊಡಲಾಗಿತ್ತು. ಮುಂದಿನ ಹಂತವಾಗಿ ರಾಜ್ಯದಿಂದ ಇಬ್ಬರ ಹೆಸರನ್ನು ದೆಹಲಿಗೆ ಕಳುಹಿಸಿಕೊಡಲಾಗಿತ್ತು. ಈ ಪಟ್ಟಿಯಲ್ಲಿ ಕಾರ್ಕಳದ ಪ್ರಸಾದ್ ಅವರೂ ಆಯ್ಕೆಗೊಂಡಿದ್ದರು.

ಮೋದಿ ಭೇಟಿ ಬಳಿಕ ನ್ಯೂಸ್‌ ಕಾರ್ಕಳದೊಂದಿಗೆ ಮಾತನಾಡಿದ ಪ್ರಸಾದ್, ದೆಹಲಿಯಲ್ಲಿ ಐದಾರು ಸುತ್ತಿನ ಭದ್ರತಾ ತಪಾಸಣೆ ಬಳಿಕ ಪ್ರಧಾನಿಯವರ ಭೇಟಿಗೆ ಅವಕಾಶ ದೊರೆಯಿತು. ಬೆಂಗಳೂರಿನಿಂದ ದೆಹಲಿ ಹೋಗುವ ಖರ್ಚು ಸೇರಿದಂತೆ ಎಲ್ಲ ವೆಚ್ಚವನ್ನೂ ಇಲಾಖೆ ನೋಡಿಕೊಂಡಿದೆ. ನನ್ನಂತೆ ಅನೇಕರು ವ್ಯಾಪಾರ ನಡೆಸುತ್ತಿದ್ದು, ಅದೃಷ್ಟದಿಂದ ಪ್ರಧಾನಿ ಭೇಟಿಗೆ ಅವಕಾಶ ಪಡೆದಿರುತ್ತೇನೆಯೇ ವಿನಾಃ ಯಾವುದೇ ನನ್ನ ಸಾಧನೆಯಿಂದಲ್ಲ ಎಂದು ಮುಗ್ಧತೆಯಿಂದ ಹೇಳಿಕೊಂಡರು.





























































































































































































































error: Content is protected !!
Scroll to Top