ಜೈಲಿನಲ್ಲಿ ಕುಸಿದು ಬಿದ್ದ ಸತ್ಯೇಂದ್ರ ಜೈನ್‌

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್‌ ಜೈಲಿನಲ್ಲಿರುವ ಆಪ್‌ ಮಾಜಿ ಸಚಿವ

ಹೊಸದಿಲ್ಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿರುವ ಆಮ್‌ ಆದ್ಮಿ ಪಾರ್ಟಿಯ ನಾಯಕ, ಮಾಜಿ ಸಚಿವ ಸತ್ಯೇಂದ್ರ ಜೈನ್ ಇಂದು ಬಚ್ಚಲಿನಲ್ಲಿ ಕುಸಿದು ಬಿದ್ದಿದ್ದು, ಅವರನ್ನು ದಿಲ್ಲಿಯ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸತ್ಯೇಂದ್ರ ಜೈನ್ ಅವರು ಮೂರು ದಿನಗಳಲ್ಲಿ ಈಗ ಎರಡನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ, ಸೋಮವಾರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದಿಲ್ಲಿ ಸರ್ಕಾರದಲ್ಲಿ ಸಚಿವರಾಗಿದ್ದ 57 ವರ್ಷದ ಸತ್ಯೇಂದ್ರ ಜೈನ್ ಅವರನ್ನು ಮೇ 30ರಂದು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಐಪಿಸಿ ಸೆಕ್ಷನ್ 109 ಮತ್ತು ಸೆಕ್ಷನ್ 13(2)ರ ಅಡಿ ಸತ್ಯೇಂದ್ರ ಜೈನ್ ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದೆ.
ಕೊಲ್ಕತ್ತಾ ಮೂಲದ ಕಂಪನಿಯೊಂದಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈ ವರ್ಷ ಮೇ ತಿಂಗಳಲ್ಲಿ 4.81 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ವಶಪಡಿಸಿಕೊಂಡ ನಂತರ ಇಡಿ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿತ್ತು. ಸತ್ಯೇಂದ್ರ ಜೈನ್ ಷೇರುದಾರರಾಗಿದ್ದ 4 ಕಂಪನಿಗಳಿಂದ ಪಡೆದ ಹಣದ ಮೂಲವನ್ನು ವಿವರಿಸಿಲ್ಲ ಎಂದು ಇಡಿ ಆರೋಪಿಸಿತ್ತು.

error: Content is protected !!
Scroll to Top