ಸಚಿವ ಸಂಪುಟ ರಚನೆಗೆ ತೀವ್ರ ಕಸರತ್ತು

ಬೆಂಬಲಿಗರನ್ನು ಸೇರಿಸಲು ಸಿದ್ದರಾಮಯ್ಯ, ಡಿಕೆಶಿ ಭಾರಿ ತಂತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಷ್ಟೇ ಒಗ್ಗಟ್ಟು ಪ್ರದರ್ಶಿಸಿದರೂ ಒಳ ಬೇಗುದಿ ಮುಂದುವರಿದಿದೆ. ಬಹಳಷ್ಟು ಕಿತ್ತಾಟದ ಬಳಿಕ ಸರಕಾರವೇನೋ ರಚನೆಯಾಗಿದೆ. ಆದರೆ ಸಚಿವ ಸಂಪುಟ ರಚನೆ ಮಾತ್ರ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಯಾರನ್ನೆಲ್ಲ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬುದೇ ಇನ್ನೂ ನಿರ್ಧಾರವಾಗಿಲ್ಲ. ತಮ್ಮ ಬಣದವರಿಗೆ ಸಂಪುಟದಲ್ಲಿ ಹೆಚ್ಚು ಅವಕಾಶ ಸಿಗುವಂತೆ ಮಾಡಲು ಸಿದ್ದರಾಮಯ್ಯ ಮತ್ತು ಡಿಕೆಶಿ ತೆರೆಮರೆಯಲ್ಲೇ ತಂತ್ರಗಾರಿಕೆ ರೂಪಿಸುತ್ತಿದ್ದಾರೆ.
ತಮ್ಮ ಬೆಂಬಲಿಗರನ್ನು ಸಂಪುಟದಲ್ಲಿ ಸೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸರ್ಕಸ್ ನಡೆಸುತ್ತಿದ್ದು, ಯಾರಿಗೆ ಸಚಿವ ಸ್ಥಾನ ನೀಡುವುದು ಅಂತ ಹೈಕಮಾಂಡ್​ಗ್ ತಲೆ ಬಿಸಿಯಾಗಿದೆ. ಮೇ 24ರಂದು ಅಧಿವೇಶನ ಮುಕ್ತಾಯವಾಗಲಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ದಿಲ್ಲಿಗೆ ಪ್ರಯಾಣ ಮಾಡಲಿದ್ದಾರೆ.
ಡಿ.ಕೆ. ಶಿವಕುಮಾಋಗೆ ಸಡ್ಡು ಹೊಡೆದು ತಮ್ಮ ಬೆಂಬಲಿಗರನ್ನು ಸಂಪುಟಕ್ಕೆ ಸೇರಿಸಲು ಕಸರತ್ತು ನಡೆಸುತ್ತಿರುವ ಸಿದ್ದರಾಮಯ್ಯ, ರಣತಂತ್ರ ರೂಪಿಸುತ್ತಿದ್ದಾರೆ. ಸಚಿವ ಕೆ.ಜೆ.ಜಾರ್ಜ್‌ ಹಾಗೂ ಶಾಸಕ ಭೈರತಿ ಸುರೇಶ್ ಮತ್ತಿತರ ಆಪ್ತರ ಜತೆ ಗೌಪ್ಯ ಸ್ಥಳದಲ್ಲಿ ನಡೆಸಿದ್ದಾರೆ. ನಾಯಕರ ನಡುವೆ ಮುಂದಿನ ನಡೆ ಬಗ್ಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.
ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಭಾರಿ ಪೈಪೋಟಿ ನಡೆದಿತ್ತು. ಕೊನೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಮನವೊಲಿಸುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿತ್ತು. ಅದರಂತೆ ಸಿಎಂ ಸ್ಥಾನ ಸಿದ್ದರಾಮಯ್ಯ ಪಾಲಾಗಿದ್ದು, ಡಿಕೆ ಶಿವಕುಮಾರ್ ಅವರು ಡಿಸಿಎಂ ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು. ಹೈಕಮಾಂಡ್ ಇಬ್ಬರ ನಡುವೆ ಅಧಿಕಾರ ಹಂಚಿಕೆ ಸೂತ್ರ ರಚಿಸಿರುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳು ಅಭಿಪ್ರಾಯಪಟ್ಟಿದ್ದವು. ಆದರೆ, ಈ ವಿಚಾರವಾಗಿ ಎಐಸಿಸಿ ಅಧಿಕೃತ ಹೇಳಿಕೆಯನ್ನೇನೂ ನೀಡಿಲ್ಲ. ಈ ಬಗ್ಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲವಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಎಂ.ಬಿ. ಪಾಟೀಲ್ ಅಧಿಕಾರ ಹಂಚಿಕೆ ಮಾತುಕತೆಯಾಗಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಜೊತೆ ಎಂಟು ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಪೈಕಿ ಹೆಚ್ಚಿನವರು ಸಿದ್ದರಾಮಯ್ಯ ಅವರ ಬಣಕ್ಕೆ ಸೇರಿದವರಾಗಿದ್ದಾರೆ. ಸಂಪೂರ್ಣ ಸಂಪುಟ ರಚನೆಗೆ ಕಾಂಗ್ರೆಸ್ ಕಸರತ್ತು ನಡೆಸುತ್ತಿದ್ದು, ಮೇ 24ರ ಒಳಗಾಗಿ ಪೂರ್ಣಗೊಳಿಸುವುದಾಗಿ ಹೈಕಮಾಂಡ್ ಸೂಚಿಸಿದೆ. ಆದರೆ ಯಾರಿಗೆಲ್ಲ ಮಂತ್ರಿಗಿರಿ ಸಿಗಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

error: Content is protected !!
Scroll to Top