40 ಪರ್ಸೆಂಟ್‌ ಕಮಿಷನ್‌ ಸಾಬೀತುಪಡಿಸಿ : ಸರಕಾರಕ್ಕೆ ಬೊಮ್ಮಾಯಿ ಸವಾಲು

ತನಿಖೆ ನಡೆಸಿ ಸಾಕ್ಷಿ ಸಮೇತ ನಿರೂಪಿಸಿ ಎಂದ ಮಾಜಿ ಮುಖ್ಯಮಂತ್ರಿ

ಬೆಂಗಳೂರು: ಬಿಜೆಪಿ ಸರಕಾರದ ಆಡಳಿತದಲ್ಲಿ 40 ಪರ್ಸೆಂಟ್ ಕಮಿಷನ್ ಇತ್ತು ಎಂಬುದನ್ನು ಸಾಕ್ಷಿ ಸಮೇತ ಸಾಬೀತುಪಡಿಸಬೇಕು ಎಂದು ಕಾಂಗ್ರೆಸ್ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳು ಅಥವಾ ಅಕ್ರಮಗಳ ಬಗ್ಗೆ ತನಿಖೆ ನಡೆಸಿ, ಸತ್ಯ ಹೊರಬರಲಿ. 40 ಪರ್ಸೆಂಟ್ ಕಮಿಷನ್ ಆಪಾದನೆಯನ್ನು ಈಗ ಸಾಕ್ಷ್ಯ ಸಮೇತ ಸಾಬೀತುಪಡಿಸಲಿ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಎಲ್ಲ ಪುರಾವೆಗಳೊಂದಿಗೆ 40 ಪರ್ಸೆಂಟ್ ಕಮಿಷನ್ ಇದೆ ಎಂದು ತೋರಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು, ಟೆಂಡರುಗಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆಂದು ಆರೋಪಿಸಿದ್ದರು. ಚುನಾವಣೆಯ ಪ್ರಚಾರದಲ್ಲಿ ಕಾಂಗ್ರೆಸ್‌ಗೆ ಇದು ಪ್ರಮುಖ ಅಸ್ತ್ರವಾಗಿತ್ತು.
ಗುತ್ತಿಗೆದಾರರ ಸಂಘದವರು ಈಗಲಾದರೂ ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆಯೇ? ಕೆಂಪಣ್ಣ ಇಲ್ಲಿಯವರೆಗೆ ದಾಖಲೆಗಳನ್ನು ನೀಡಿಲ್ಲ. ನ್ಯಾಯಾಲಯಗಳಿಗೂ ನೀಡಿಲ್ಲ. ಆದರೆ, ಬಿಜೆಪಿ ವಿರುದ್ಧ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಲಾಭವಾಗಿದೆ. ಈಗಲಾದರೂ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಬೊಮ್ಮಾಯಿ ಹೇಳಿದ್ದಾರೆ.
ಪಿಎಸ್‌ಐ ನೇಮಕಾತಿ ಹಗರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂಬ ಹೇಳಿಕೆಗೆ ಸಂಬಂಧಿಸಿದಂತೆ, ‘ಅವರು ಎಲ್ಲವನ್ನೂ ತನಿಖೆ ಮಾಡಲಿ. ಅವರ ಹಿಂದಿನ ಅಧಿಕಾರಾವಧಿಯಲ್ಲಿ ನಡೆದಿರುವ ಹಗರಣಗಳ ಕುರಿತು ಲೋಕಾಯುಕ್ತ ಮತ್ತು ಸಿಐಡಿಗೆ ಪ್ರಕರಣಗಳನ್ನು ನೀಡಿದ್ದೇವೆ. ಅವರ ಮತ್ತು ನಮ್ಮ ಅವಧಿಯಲ್ಲಿ ಏನಾಯಿತು ಎಂಬುದನ್ನು ತನಿಖೆ ಮಾಡಿ, ಸತ್ಯ ಹೊರತರಲಿ ಎಂದರು.

error: Content is protected !!
Scroll to Top