ತಮಿಳುನಾಡು : ಕಾಂಚೀಪುರಂ ಜಿಲ್ಲೆಯ ಕುರುವಿಮಲೈ ಎಂಬಲ್ಲಿ ಬುಧವಾರ ಮಧ್ಯಾಹ್ನ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 7 ಮಂದಿ ಸಾವಿಗೀಡಾಗಿದ್ದು 13 ಮಂದಿ ಗಾಯಗೊಂಡಿದ್ದಾರೆ. ಖಾಸಗಿ ಪಟಾಕಿ ಗೋದಾಮಿನ 30 ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾಗ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗೋದಾಮಿನಲ್ಲಿದ್ದ ಪಟಾಕಿಗಳು ಭಾರೀ ಸದ್ದಿನಿಂದ ಸಿಡಿದಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಕಟ್ಟಡ ಕುಸಿದಿದ್ದು, ಸಿಲುಕಿರುವ ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ತಮಿಳುನಾಡು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಡಿಜಿಪಿ ಅಭಾಷ್ ಕುಮಾರ್ ತಿಳಿಸಿದ್ದಾರೆ.
ಇಡೀ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 20 ಮಂದಿ ನೌಕರರು ಕಟ್ಟಡದಲ್ಲಿ ಸಿಲುಕಿಕೊಂಡಿದ್ದಾರೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಕಾಂಚೀಪುರಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಗಾಯಗೊಂಡಿರುವ 13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಂಚೀಪುರಂನಲ್ಲಿರುವ ಪಟಾಕಿ ಗೋದಾಮಿನಲ್ಲಿ ಸ್ಫೋಟ; 13 ಮಂದಿ ಗಾಯಗೊಂಡಿದ್ದು, ಇಬ್ಬರು ಮಹಿಳೆ ಸೇರಿದಂತೆ ಏಳು ಜನರ ಸಾವು
