ಯಕ್ಷ ರಂಗಾಯಣದಲ್ಲಿ ‘ಮಕ್ಕಳ ಮಾಯಾಲೋಕ’ ನಾಟಕ ಪ್ರದರ್ಶನ
ಕಾರ್ಕಳ : ಯಕ್ಷ ರಂಗಾಯಣ ಕಾರ್ಕಳ ಆಶ್ರಯದಲ್ಲಿ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಅಭಿವೃದ್ಧಿ ಸಮಿತಿ ಮತ್ತು ರಂಗ ಸಂಸ್ಕೃತಿ ಕಾರ್ಕಳ ಇದರ ಸಹಕಾರದೊಂದಿಗೆ ಮಾ.27ರಂದು ಸಂಜೆ 6.30ಕ್ಕೆ ಕಾರ್ಕಳ ಕೋಟಿ-ಚೆನ್ನಯ ಥೀಂ ಪಾರ್ಕ್‌ನ ವನರಂಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಮಕ್ಕಳ ಮಾಯಾಲೋಕ ನಾಟಕ ಪ್ರದರ್ಶನ ನಡೆಯಲಿದೆ.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಯಕ್ಷ ರಂಗಾಯಣದ ನಿರ್ದೇಶಕ ಡಾ| ಜೀವನ್ ರಾಂ ಸುಳ್ಯ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸದಸ್ಯ, ರಂಗಕರ್ಮಿ ಡಾ.ಬಿ.ವಿ.ರಾಜಾರಾಂ ಪ್ರಧಾನ ಭಾಷಣ ಮಾಡಲಿದ್ದಾರೆ. ರಂಗನಿರ್ದೇಶಕ ಕೆ.ಜಿ.ಕೃಷ್ಣಮೂರ್ತಿ ಹೆಗ್ಗೋಡು ಮತ್ತು ರಂಗ ಸಂಸ್ಕೃತಿ ಕಾರ್ಕಳ ಇದರ ಅಧ್ಯಕ್ಷ ಎಸ್.ನಿತ್ಯಾನಂದ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬಳಿಕ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡುಬಿದ್ರೆ ಇದರ ಕಲಾವಿದರು ಅಭಿನಯಿಸುವ ಮಕ್ಕಳ ಮಾಯಾಲೋಕ ನಾಟಕ ಪ್ರದರ್ಶನಗೊಳ್ಳಲಿದೆ.
ಅದ್ಭುತ ರಮ್ಯ ಮಕ್ಕಳ ಮಾಯಾಲೋಕ
ಮಕ್ಕಳ ರಂಗಭೂಮಿಯಲ್ಲಿ ಹೊಸ ಸಂಚಲನ ಮೂಡಿಸಿದ ನಾಟಕ ಮಕ್ಕಳ ಮಾಯಾಲೋಕ. ಸಿ.ಎಸ್.ಲೆವಿಸ್ ಅವರ ರಷ್ಯನ್ ಮೂಲದ ಕತೆಯನ್ನು ಕೆ.ಜಿ.ಕೃಷ್ಣಮೂರ್ತಿ ರಚಿಸಿದ್ದು, ರಂಗಮಾಂತ್ರಿಕ ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದಾರೆ. ಈಗಾಗಲೇ ದಿಲ್ಲಿ ಸೇರಿ ರಾಜ್ಯಾದ್ಯಂತ 375ಕ್ಕಿಂತಲೂ ಹೆಚ್ಚು ಪ್ರದರ್ಶನ ಕಂಡ ಬಹುಬೇಡಿಕೆಯ ನಾಟಕವಾಗಿದೆ. ಪರಿಸರ ಕಾಳಜಿ, ಮನುಷ್ಯ ಪ್ರಾಣಿಗಳ ಸಹಜ ಪ್ರೀತಿ ಸಂಬಂಧದ ಬಗ್ಗೆ ಎಳೆಎಳೆಯಾಗಿ ಫ್ಯಾಂಟಸಿ ದೃಶ್ಯಗಳ ಮೂಲಕ ನಾಟಕ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಕ್ಷಣಮಾತ್ರದಲ್ಲಿ ಬದಲಾಗುವ ದೃಶ್ಯವೈಭವ, ಕಲಾವಿದರ ಪರಿಪಕ್ವ ಅಭಿನಯ, ಸುಶ್ರಾವ್ಯ ಸಂಗೀತ, ಸ್ಪಷ್ಟ ಕನ್ನಡ ಮಾತುಗಾರಿಕೆ, ಪ್ರಾಣಿ ಮುಖವಾಡಗಳ ಬಳಕೆ, ವಿಶೇಷ ವಸ್ತ್ರ ವಿನ್ಯಾಸ, ಬೆಳಕಿನ ಸಂಯೋಜನೆ-, ರಂಗಪರಿಕರಗಳು, ಜಾದೂ ತಂತ್ರಗಳು ಮುಂತಾದವುಗಳಿಂದ ಕಟ್ಟಲ್ಪಟ್ಟ ಈ ನಾಟಕ ಪ್ರತಿಕ್ಷಣ ನೋಡುಗರನ್ನು ಬೆರಗುಗೊಳಿಸಲಿದೆ.
ಸಮಯಕ್ಕೆ ಸರಿಯಾಗಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು ಆಸಕ್ತರು ತಮ್ಮ ಮಕ್ಕಳೊಂದಿಗೆ ಹತ್ತು ನಿಮಿಷ ಮುಂಚಿತವಾಗಿ ಬರಬೇಕೆಂದು ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ತಿಳಿಸಿದ್ದಾರೆ.
