ಒಂದೇ ಕುಟುಂಬದ ಮೂವರು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು

ಕಾರ್ಕಳ : ಒಂದೇ ಕುಟುಂಬದ ಮೂವರು ಒಂದೇ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಅಪರೂಪದ ವಿದ್ಯಮಾನ ಕಾರ್ಕಳದಲ್ಲಿದೆ. ಇಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿರುವ ಡಾ. ಕೆ.ಎಸ್.‌ ರಾವ್‌ (ಮೂಳೆ ತಜ್ಞ), ಅವರ ಪತ್ನಿ ಸ್ತ್ರೀರೋಗ ತಜ್ಞೆ ಡಾ. ನಾಗರತ್ನಾ ಹಾಗೂ ಅವರ ಪುತ್ರಿ ಡಾ. ಸ್ಪಂದನಾ ರಾವ್‌ ಒಂದೇ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷ.
ಕಳೆದ 20 ವರ್ಷಗಳಿಂದ ಎಲುಬು ತಜ್ಞರಾಗಿರುವ ಡಾ. ಕೆ.ಎಸ್.‌ ರಾವ್‌ ಅವರು ಕಳೆದ 2 ವರ್ಷಗಳಿಂದ ಆಡಳಿತ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಾ. ನಾಗರತ್ನಾ ಅವರು 6 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಪುತ್ರಿ ಸ್ಪಂದನಾ ರಾವ್ 6 ತಿಂಗಳ ಹಿಂದೆ ಸೇರ್ಪಡೆಗೊಂಡಿರುತ್ತಾರೆ. ಸರಕಾರಿ ಆಸ್ಪತ್ರೆಯ ಕರ್ತವ್ಯ ಮಾತ್ರವಲ್ಲದೇ ಕಾರ್ಕಳದಲ್ಲೇ ಖಾಸಗಿ ಆಸ್ಪತ್ರೆಯನ್ನೂ ಇವರು ನಡೆಸುತ್ತಿದ್ದಾರೆ.

ಡಾ. ಗಣೇಶ್ ಭಟ್ ವರ್ಗಾವಣೆ ರದ್ದುಗೊಳಿಸುವಂತೆ ಆಗ್ರಹ
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ, ಸ್ತ್ರೀ ರೋಗ ತಜ್ಞರಾಗಿದ್ದ ಡಾ. ಗಣೇಶ್‌ ಭಟ್‌ ಅವರು ಫೆ. 1ರಂದು ವರ್ಗಾವಣೆಗೊಂಡಿದ್ದಾರೆ. ಸೇವಾ ಮನೋಭಾವ, ರೋಗಿಗಳ ಕುರಿತು ವಿಶೇಷ ಕಾಳಜಿ ಹೊಂದಿದ್ದ ಡಾ. ಗಣೇಶ್‌ ಅವರ ವರ್ಗಾವಣೆ ಇದೀಗ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ತಿಂಗಳಿಗೆ ಸರಾಸರಿ 50 ಮಂದಿ ಹೆರಿಗೆಗೆ ದಾಖಲಾಗುತ್ತಿದ್ದಲ್ಲಿ ಡಾ. ಗಣೇಶ್‌ ಭಟ್‌ ಕಾರ್ಕಳ ಆಸ್ಪತ್ರೆ ಬಂದ ಬಳಿಕ ಅದರ ಸಂಖ್ಯೆ ಸರಾಸರಿ 150ಕ್ಕೆ ಏರಿದೆ. ವರ್ಗಾವಣೆ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಅವರ ವರ್ಗಾವಣೆ ತಿಳಿಯದ ಕೆಲವರು ಆಸ್ಪತ್ರೆ ಬಂದು ಅವರಿಲ್ಲ ಎಂದು ತಿಳಿದು ವಾಪಸಾಗುವ ನಿದರ್ಶನವೂ ಕಂಡುಬರುತ್ತಿದೆ. ಡಾ. ಗಣೇಶ್‌ ಭಟ್‌ ಅವರಂತಹ ಅತ್ಯುತ್ತಮ ವೈದ್ಯರನ್ನು ಕಾಪುವಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಿರುವುದು ಸೋಜಿಗದ ಸಂಗತಿ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆಯೇ ಹೊರತು ಹೆರಿಗೆಯ ವ್ಯವಸ್ಥೆಯಿಲ್ಲ. ಆದ್ದರಿಂದ ಮತ್ತೆ ಈ ವೈದ್ಯರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಮರು ವರ್ಗಾವಣೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Latest Articles

error: Content is protected !!