ಚೆನ್ನೈ: ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಪದ್ಮಭೂಷಣ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತೆ, ಹಿರಿಯ ಗಾಯಕಿ ವಾಣಿ ಜೈರಾಮ್ (78) ಅವರು ಫೆ. 4 ರಂದು ನಿಧನರಾಗಿದ್ದಾರೆ. ಚೆನ್ನೈನಲ್ಲಿ ನೆಲೆಸಿದ್ದ ವಾಣಿ ಜೈರಾಮ್ ಅವರು ಐದು ದಶಕಗಳ ವೃತ್ತಿಜೀವನವನ್ನು ಹೊಂದಿದ್ದಾರೆ. ವಿವಿಧ ಭಾರತೀಯ ಭಾಷೆಗಳಲ್ಲಿ ಸುಮಾರು 10,000 ಹಾಡುಗಳನ್ನು ಹಾಡಿದ್ದಾರೆ. ವೆಲ್ಲೂರಿನವರಾದ ಅವರು ತಮಿಳು, ಕನ್ನಡ, ಹಿಂದಿ, ತೆಲುಗು, ಮಲಯಾಳಂ, ಮರಾಠಿ, ಒಡಿಯಾ, ಗುಜರಾತಿ, ಹರ್ಯಾನ್ವಿ, ಅಸ್ಸಾಮಿ, ತುಳು ಮತ್ತು ಬಂಗಾಳಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡಿದ್ದಾರೆ. ಪ್ರಪಂಚದಾದ್ಯಂತ ಹಲವಾರು ಸಂಗೀತ ಕಚೇರಿಗಳನ್ನು ಸಹ ನಡೆಸಿಕೊಟ್ಟಿದ್ದಾರೆ. ಹೃಷಿಕೇಶ್ ಮುಖರ್ಜಿ ನಿರ್ದೇಶಿಸಿದ 1971ರ ಹಿಂದಿ ಚಿತ್ರ ಗುಡ್ಡಿಯೊಂದಿಗೆ ವಾಣಿ ಜೈರಾಮ್ ಹಿನ್ನೆಲೆ ಗಾಯಕಿಯಾಗಿ ಪಾದಾರ್ಪಣೆ ಮಾಡಿದ್ದರು.