ವೈದ್ಯಕೀಯ ವಿದ್ಯಾರ್ಥಿನಿಯ ಮರ್ಯಾದಾ ಹತ್ಯೆ

ತಂದೆ, ಸಹೋದರನಿಂದಲೇ ಯುವತಿ ಕೊಲೆ

ಮುಂಬಯಿ: ವೈದ್ಯಕೀಯ ವಿದ್ಯಾರ್ಥಿನಿಯನ್ನೇ ತಂದೆ ಮತ್ತು ಸಹೋದರ ಮರ್ಯಾ ದೆ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದಿದೆ. 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಆಕೆಯ ತಂದೆ, ಸಹೋದರ ಮತ್ತು ಇತರ ಮೂವರು ಸಂಬಂಧಿಕರು ಸೇರಿ ಕೊಲೆ ಮಾಡಿದ್ದಾರೆ.
ಯುವತಿಯನ್ನು ಶುಭಾಂಗಿ ಜೋಗದಂದ್ ಎಂದು ಗುರುತಿಸಲಾಗಿದೆ. ಆಕೆಯ ಪ್ರೇಮ ಪ್ರಕರಣ ಬೆಳಕಿಗೆ ಬಂದ ಬಳಿಕ ಕುಟುಂಬದವರೇ ಸೇರಿ ಕತ್ತು ಹಿಸುಕಿ ಕೊಂದು, ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕತ್ತಿಗೆ ಹಗ್ಗ ಬಿಗಿದು ಕೊಂದು ನಂತರ ಹೆಣವನ್ನು ಸುಟ್ಟು ಹಾಕಿ ಅವಶೇಷಗಳನ್ನು ಹೊಳೆಯಲ್ಲಿ ಎಸೆದು ಸಾಕ್ಷ್ಯ ನಾಶ ಮಾಡಿದ್ದಾರೆ.
ನಾಂದೇಡ್ ಜಿಲ್ಲೆಯ ಲಿಂಬಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಂಪ್ರಿ ಮಹಿಪಾಲ್ ಗ್ರಾಮದಲ್ಲಿ ಜ.22 ರಂದು ಈ ಬರ್ಬರ ಹತ್ಯೆ ನಡೆದಿದೆ. ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಐವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುವತಿ ಬ್ಯಾಚುಲರ್ ಆಫ್ ಹೋಮಿಯೋಪತಿಕ್ ಮೆಡಿಸಿನ್ ಮತ್ತು ಸರ್ಜರಿ (ಬಿಎಚ್‌ಎಂಎಸ್) ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದು, ಆಕೆಯ ಮದುವೆ ನಿಶ್ಚಯವಾಗಿತ್ತು. ಆದರೆ ಆಕೆ ತನ್ನದೇ ಗ್ರಾಮದ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವುದಾಗಿ ಮನೆಯವರು ಆಯ್ಕೆ ಮಾಡಿದ ವ್ಯಕ್ತಿಗೆ ತಿಳಿಸಿದ್ದಾಳೆ. ಹೀಗಾಗಿ ಮದುವೆ ಸ್ಥಗಿತಗೊಂಡಿತ್ತು.
ಜ.22ರಂದು ರಾತ್ರಿ ತಂದೆ, ಸಹೋದರ, ಚಿಕ್ಕಪ್ಪ ಮತ್ತು ಸೋದರ ಸಂಬಂಧಿಗಳು ಆಕೆಯನ್ನು ಜಮೀನಿಗೆ ಕರೆದೊಯ್ದ, ಹತ್ಯೆ ಮಾಡಿ ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿದ್ದಾರೆ.

Latest Articles

error: Content is protected !!