ಆರೋಪಗಳ ತನಿಖೆ ಮಾಡಿಸಿ : ಬಿಜೆಪಿಗೆ ಸಿದ್ದರಾಮಯ್ಯ ಸವಾಲು

ಮೂರು ವರ್ಷ ತೆಪ್ಪಗಿದ್ದದ್ದು ಯಾಕೆ ಎಂದು ಪ್ರಶ್ನೆ

ಬೆಂಗಳೂರು: ಬಿಜೆಪಿಯ ಭ್ರಷ್ಟಾಚಾರ ಆರೋಪಗಳಿಗೆ ಸಿಡಿಮಿಡಿಗೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ತನಿಖೆ ನಡೆಸುವಂತೆ ಸವಾಲೊಡ್ಡಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ನನ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತನಿಖೆಗೆ ನಾನು ಸಿದ್ಧನಿದ್ದೇನೆ. ಆದರೆ ಇದಕ್ಕಿಂತ ಮೊದಲು ನನ್ನ ಸರಳ ಪ್ರಶ್ನೆಯೊಂದಕ್ಕೆ ಉತ್ತರಿಸಿ ಎಂದಿದ್ದು, ಇಲ್ಲಿಯವರೆಗೆ ಬಾಯಿ ಮುಚ್ಚಿಕೊಂಡಿರುವವರು ಈಗ ಯಾಕೆ ಬಾಯಿ ಬಡಿದುಕೊಳ್ಳುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಅಧಿಕಾರಕ್ಕೆ ಬಂದು ಮೂರು ಮುಕ್ಕಾಲು ವರ್ಷ ತೆಪ್ಪಗಿದ್ದ ಬಿಜೆಪಿ ನಾಯಕರು ಈಗ ಯಾಕೆ ಈ ಆರೋಪ ಮಾಡುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳುವಷ್ಟು ರಾಜ್ಯದ ಜನ ಪ್ರಬುದ್ಧರಿದ್ದಾರೆ. ತಮ್ಮ ಮೈತುಂಬಾ ಮೆತ್ತಿಕೊಂಡಿರುವ ಕಳಂಕವನ್ನು ತೊಡೆದು ಹಾಕಲು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎನ್ನುವುದು ಜನರಿಗೆ ತಿಳಿದಿದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮಾತುಮಾತಿಗೆ ಧಮ್, ತಾಕತ್ ಎಂದು ಬೊಬ್ಬಿಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾಂಗ್ರೆಸ್ ವಿರುದ್ಧದ ಭ್ರಷ್ಟಾಚಾರದ ಬಗ್ಗೆ ಇಲ್ಲಿಯ ವರೆಗೆ ತನಿಖೆ ಮಾಡದೆ ಸುಮ್ಮನಿದ್ದುದು ಯಾಕೆ? ಧಮ್ ತಾಖತ್ ಇರಲಿಲ್ಲವೇ? ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವ ಸ್ಥಾನವೂ ಸೇರಿದಂತೆ ಹಲವಾರು ಅಧಿಕಾರ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. 13 ಬಜೆಟ್ ಮಂಡಿಸಿದ್ದೇನೆ. ಇಲ್ಲಿಯವರೆಗೆ ಯಾರಾದರೂ ಒಬ್ಬ ಗುತ್ತಿಗೆದಾರ ನನ್ನ ವಿರುದ್ಧ ಲಂಚದ ಆರೋಪ ಮಾಡಿದ್ದಾರೆಯೇ? ನನ್ನ ರಾಜಕೀಯ ಜೀವನ ತೆರೆದ ಕನ್ನಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಚಿವ ಸುಧಾಕರ್ ನನ್ನ ವಿರುದ್ಧ 35 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಕೋವಿಡ್ ಕಾಲದಲ್ಲಿ ಮಾಸ್ಕ್, ಸ್ಯಾನಿಟೈಸರ್ ಗಳನ್ನು ಬಿಡದೆ ಖಜಾನೆ ಲೂಟಿ ಮಾಡಿದವರು ನನ್ನ ವಿರುದ್ಧ ಆರೋಪ ಮಾಡುತ್ತಿರುವುದು ಹಾಸ್ಯ ಪ್ರಸಂಗದಂತೆ ಕಾಣುತ್ತಿದೆ ಎಂದಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ಆಗಿನ ಲೋಕಾಯುಕ್ತರ ಮೇಲೆ ಆರೋಪಗಳು ಬಂದಿದ್ದ ಹಿನ್ನೆಲೆಯಲ್ಲಿ ಸುಧಾರಣೆ ದೃಷ್ಟಿಯಿಂದ ಎಸಿಬಿಯನ್ನು ರಚಿಸಲಾಗಿತ್ತು. ಈ ಬಗ್ಗೆ ನ್ಯಾಯಾಲಯದ ಆದೇಶವನ್ನು ನಾವು ಒಪ್ಪಿಕೊಂಡಿದ್ದೇವೆ. ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ಸೇರಿದಂತೆ 18 ರಾಜ್ಯಗಳಲ್ಲಿ ಈಗಲೂ ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆಗಳು ಜತೆಯಾಗಿಯೇ ಕೆಲಸ ಮಾಡುತ್ತಿದೆ. 11 ರಾಜ್ಯಗಳಲ್ಲಿ ಮುಖ್ಯಮಂತ್ರಿಗಳೇ ಎಸಿಬಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.ಲೋಕಾಯುಕ್ತ ಸಂಸ್ಥೆ ಬಗ್ಗೆ ಮಾತನಾಡುವ ನೈತಿಕ ಅಧಿಕಾರ ಬಿಜೆಪಿಗೆ ಇಲ್ಲ. ರಾಜ್ಯ ಹೈಕೋರ್ಟ್ ಆದೇಶದ ಮೇರೆಗೆ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತರ ಹಿಂದಿನ ಸ್ಥಾನಮಾನ ನೀಡಲಾಗಿದೆಯೇ ಹೊರತು, ಇದರಲ್ಲಿ ಬಿಜೆಪಿಯ ಪಾತ್ರ ಇಲ್ಲ ಎಂದಿದ್ದಾರೆ.

Latest Articles

error: Content is protected !!